ಢಾಕಾ: ಬಾಂಗ್ಲಾದೇಶದಲ್ಲಿ ಪ್ರಸ್ತುತ ಹಿಂಸಾಚಾರ ಭುಗಿಲೆದ್ದಿದೆ. ಇತ್ತೀಚೆಗೆ ಇಂಕ್ವಿಲಾಬ್ ಮಂಚ್ ವಕ್ತಾರ ಮತ್ತು ಇಸ್ಲಾಂ ಕಟ್ಟರ್ ವಾದಿ ನಾಯಕ ಉಸ್ಮಾನ್ ಹಾದಿ ಹತ್ಯೆಯ ನಂತರ ಢಾಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಏತನ್ಮಧ್ಯೆ, ಬಾಂಗ್ಲಾದೇಶದಲ್ಲಿ ಮತ್ತೊಂದು ಪ್ರಮುಖ ಗುಂಡಿನ ದಾಳಿಯ ಸುದ್ದಿ ಹೊರಬಿದ್ದಿದೆ.
ವಿದ್ಯಾರ್ಥಿ ನೇತೃತ್ವದ ರಾಷ್ಟ್ರೀಯ ನಾಗರಿಕ ಪಕ್ಷದ (ಎನ್‌ಸಿಪಿ) ನಾಯಕನ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಬಿಎನ್‌ಪಿಯ ಖುಲ್ನಾ ವಿಭಾಗೀಯ ಮುಖ್ಯಸ್ಥ ಮೊಟಲೆಬ್ ಸಿಕ್ದರ್ ತಲೆಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಸಿಕ್ದರ್ ತಲೆಯ ಎಡಭಾಗಕ್ಕೆ ಗುಂಡು ಹೊಕ್ಕಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಂಸಾಚಾರದಲ್ಲಿ ಮುಳುಗಿರುವ ನೆರೆಯ ದೇಶ
ಕಳೆದ ವಾರ, ಇಸ್ಲಾಂ ಕಟ್ಟರ್ ವಾದಿ ನಾಯಕ ಷರೀಫ್ ಒಸ್ಮಾನ್ ಹಾದಿ ಹತ್ಯೆಯ ನಂತರ ಬಾಂಗ್ಲಾದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಹಾದಿ ತಮ್ಮ ಭಾರತ ವಿರೋಧಿ ಭಾಷಣಕ್ಕೆ ಹೆಸರುವಾಸಿಯಾಗಿದ್ದನು. ಬಾಂಗ್ಲಾದೇಶದಲ್ಲಿ 2024ರ ವಿದ್ಯಾರ್ಥಿ ದಂಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದನು.
ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಗಮನಾರ್ಹವಾಗಿ, ಮಧ್ಯಂತರ ಸರ್ಕಾರ ರಚನೆಯಾದ ನಂತರ ಬಾಂಗ್ಲಾದೇಶ ತನ್ನ ಮೊದಲ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುತ್ತಿದೆ. ಫೆಬ್ರವರಿ 2026ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಿಗದಿಯಾಗಿವೆ. ಆಶ್ಚರ್ಯಕರವಾಗಿ, ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ದೇಶದ ವಿವಿಧ ಭಾಗಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವರದಿಗಳು ಹೊರಬರುತ್ತಿವೆ.