ದುಬೈ: ಬಾಂಗ್ಲಾದೇಶದ ವಿದ್ಯಾರ್ಥಿ ದಂಗೆಯ ನಾಯಕ ಒಸ್ಮಾನ್ ಹಾದಿ ಹತ್ಯೆಯ ಪ್ರಮುಖ ಶಂಕಿತ ಆರೋಪಿ ಎಂದು ಹೇಳಲಾಗುತ್ತಿರುವ ಫೈಸಲ್ ಕರೀಮ್ ಮಸೂದ್ ದುಬೈನಲ್ಲಿ ಪ್ರತ್ಯಕ್ಷನಾಗಿದ್ದು, ತನ್ನ ವಿರುದ್ಧ ಕೇಳಿ ಬಂದಿರುವ ಆರೋಪ ಸಂಬಂಧ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾನೆ.
ವಿದೇಶದಿಂದ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಆರೋಪಿ, ತಾನು ದುಬೈನಲ್ಲಿರುವುದಾಗಿ ಹೇಳಿದ್ದಾನೆ. ಅಲ್ಲದೆ, ಹತ್ಯೆ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿ ನಾನು ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.
ನಾನು ಪ್ರಸ್ತುತ ದುಬೈನಲ್ಲಿದ್ದೇನೆ.ಈ ಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಮಾತ್ರವಲ್ಲದೆ ಜಮಾತ್ ಶಿಬಿರ್ ಮೇಲೆ ಆರೋಪ ಹೊರಿಸಿ ಹಾದಿಯೊಂದಿಗಿನ ನನ್ನ ಸಂಬಂಧಗಳು ಕಟ್ಟುನಿಟ್ಟಾಗಿ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ತಿಳಿಸಿದ್ದಾನೆ.
ನಾನು ಹತ್ಯೆಗೈದಿಲ್ಲ. ನನ್ನ ಕುಟುಂಬ ಮತ್ತು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ನನ್ನನ್ನು ರಕ್ಷಿಸಿಕೊಳ್ಳಲು ನಾನು ದುಬೈಗೆ ಬಂದಿದ್ದೇನೆ. ಹಾದಿ ಜಮಾತ್‌ನ ಉತ್ಪನ್ನ. ಬಹುಶಃ ಇದರ ಹಿಂದೆ ಜಮಾತಿಗಳು ಇದ್ದಿರಬಹುದು ಎಂದು ಹೇಳಿದ್ದಾರೆ.
ಡಿಸೆಂಬರ್ 12 ರಂದು ಹಾದಿ ಮೇಲೆ ನಡೆದ ದಾಳಿಯ ನಂತರ ಮಸೂದ್ ಮತ್ತು ಮತ್ತೊಬ್ಬ ಶಂಕಿತ ಅಲಂಗೀರ್ ಶೇಖ್ ದೇಶ ಬಿಟ್ಟು ಪಲಾಯನ ಮಾಡಿ, ಹಲುಘಾಟ್ ಗಡಿಯ ಮೂಲಕ ಭಾರತಕ್ಕೆ ತಲುಪಿದ್ದಾರೆ ಎಂದು ಬಾಂಗ್ಲಾದೇಶ ಪೊಲೀಸರು ಆರೋಪಿಸಿದ್ದರು.
ಭಾರತೀಯ ಭದ್ರತಾ ಅಧಿಕಾರಿಗಳು, ಗಡಿ ಭದ್ರತಾ ಪಡೆ ಮತ್ತು ಮೇಘಾಲಯ ಪೊಲೀಸರು ಇಬ್ಬರು ಭಾರತಕ್ಕೆ ಬಂದಿಲ್ಲ, ಬಾಂಗ್ಲಾ ಹೇಳಿಕೊಂಡಿರುವುದು ಆಧಾರರಹಿತವೆಂದು ತಳ್ಳಿಹಾಕಿದ್ದರು.