ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಶ್ಚಿಮಾತ್ಯ ದೇಶಗಳಿಗೆ ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಷ್ಯಾ-ಯುಕ್ರೇನ್ ಯುದ್ಧದ ವಿಚಾರದಲ್ಲಿ ವಿದೇಶಾಂಗ ಸಚಿವರು ಈ ಹಿಂದೆ ಹಲವು ಬಾರಿ ಪಶ್ಚಿಮದ ನೆಲದಲ್ಲೆ ನಿಂತು ಆ ದೇಶಗಳನ್ನು ಟೀಕಿಸಿದ್ದರು. ಈಗ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಜೈಶಂಕರ್, ಪ್ರಜಾಪ್ರಭುತ್ವವನ್ನು ಪಾಶ್ಚಾತ್ಯರ ಕೊಡುಗೆ ಎಂದು ಪಾಶ್ಚಾತ್ಯ ರಾಷ್ಟ್ರಗಳು ಪರಿಗಣಿಸುವುದನ್ನು ಟೀಕಿಸಿದ್ದಾರೆ.
ಪಾಶ್ಚತ್ಯ ದೇಶಗಳು ತಮ್ಮ ದೇಶದಲ್ಲಿ ಮೌಲ್ಯಯುತವಾಗಿರುವುದನ್ನು ವಿದೇಶದಲ್ಲಿ ಅಭ್ಯಾಸ ಮಾಡುತ್ತಿಲ್ಲ ಎಂದು ಜೈಶಂಕರ್ ಆರೋಪಿಸಿದ್ದಾರೆ.
ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ "ಲೈವ್ ಟು ವೋಟ್ ಅನದರ್ ಡೇ: ಫೋರ್ಟಿಫೈಯಿಂಗ್ ಡೆಮಾಕ್ರಟಿಕ್ ರೆಸಿಲಿಯನ್ಸ್" ಎಂಬ ಶೀರ್ಷಿಕೆಯ ಪ್ಯಾನಲ್ ಚರ್ಚೆಯಲ್ಲಿ ಜೈಶಂಕರ್ ಶುಕ್ರವಾರ ಈ ಹೇಳಿಕೆಗಳನ್ನು ನೀಡಿದ್ದಾರೆ.
"ನೀವು ಅಂತಿಮವಾಗಿ ಪ್ರಜಾಪ್ರಭುತ್ವ ಮೇಲುಗೈ ಸಾಧಿಸಲು ಬಯಸಿದರೆ, ಪಶ್ಚಿಮವು ಪಶ್ಚಿಮದ ಹೊರಗೆ ಯಶಸ್ವಿ ಮಾದರಿಗಳನ್ನು (ಪ್ರಜಾಪ್ರಭುತ್ವ) ಅಳವಡಿಸಿಕೊಳ್ಳುವುದು ಮುಖ್ಯ" ಎಂದು ಜೈಶಂಕರ್ ಪಶ್ಚಿಮದ ದೇಶಗಳಿಗೆ ಪಾಠ ಮಾಡಿದ್ದಾರೆ.
"ನಾನು ಇದನ್ನು ಎಲ್ಲಾ ಪ್ರಾಮಾಣಿಕತೆಯಿಂದ ಹೇಳಬೇಕು, ಅದೇನೆಂದರೆ, ಒಂದು ಸಮಯವಿತ್ತು, ಆಗ ಪಶ್ಚಿಮವು ಪ್ರಜಾಪ್ರಭುತ್ವವನ್ನು ಪಾಶ್ಚಿಮಾತ್ಯ ಲಕ್ಷಣವೆಂದು ಪರಿಗಣಿಸಿ ಜಾಗತಿಕ ದಕ್ಷಿಣದಲ್ಲಿ ಪ್ರಜಾಪ್ರಭುತ್ವೇತರ ಶಕ್ತಿಗಳನ್ನು ಪ್ರೋತ್ಸಾಹಿಸುವಲ್ಲಿ ಅಥವಾ ಉತ್ತೇಜಿಸುವಲ್ಲಿ ನಿರತವಾಗಿತ್ತು. ಅದು ಇನ್ನೂ ಹಾಗೆಯೇ ಮಾಡುತ್ತಿದೆ. ನೀವು ಮನೆಯಲ್ಲಿ ಮೌಲ್ಯಯುತವಾದದ್ದು ಎಂದು ಪರಿಗಣಿಸುವ ಎಲ್ಲವನ್ನೂ ನೀವು ವಿದೇಶಗಳಲ್ಲಿ ಅಭ್ಯಾಸ ಮಾಡುವುದಿಲ್ಲ."
"ಆದ್ದರಿಂದ, ಉಳಿದ ಜಾಗತಿಕ ದಕ್ಷಿಣವು ಇತರ ದೇಶಗಳ ಯಶಸ್ಸುಗಳು, ನ್ಯೂನತೆಗಳು ಮತ್ತು ಪ್ರತಿಕ್ರಿಯೆಗಳನ್ನು ವೀಕ್ಷಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
"ಕಡಿಮೆ ಆದಾಯವಿದ್ದರೂ ಸಹ, ನಾವು ಎದುರಿಸಿದ ಎಲ್ಲಾ ಸವಾಲುಗಳಿಗೆ ಭಾರತವು ಪ್ರಜಾಪ್ರಭುತ್ವ ಮಾದರಿಗೆ ನಿಷ್ಠವಾಗಿಯೆ ಉಳಿದಿದೆ, ಅಂದರೆ ನಮ್ಮ ಪ್ರಪಂಚದ ಭಾಗವನ್ನು ನೋಡಿದರೆ, ನಾವು ಪ್ರಜಾಪ್ರಭುತ್ವಕ್ಕೆ ನಿಷ್ಠರಾಗಿ ಉಳಿದ ಏಕೈಕ ದೇಶವಾಗಿದ್ದೇವೆ" ಎಂದು ಅವರು ಹೇಳಿದರು.
"ಆದ್ದರಿಂದ ಪಶ್ಚಿಮವು ಗಮನಿಸಬೇಕಾದ ವಿಷಯ ಇದಾಗಿದೆ ಎಂದು ನಾನು ಭಾವಿಸುತ್ತೇನೆ, "ಪ್ರಜಾಪ್ರಭುತ್ವವು ಅಂತಿಮವಾಗಿ ಮೇಲುಗೈ ಸಾಧಿಸಬೇಕೆಂದು ನೀವು ಬಯಸಿದರೆ, ಪಶ್ಚಿಮವು ಪಶ್ಚಿಮದ ಹೊರಗೆ ಯಶಸ್ವಿ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ" ಎಂದು ಅವರು ಸಮ್ಮೇಳನದಲ್ಲಿ ಕರೆ ನೀಡಿದ್ದಾರೆ.
"ಪ್ರಜಾಪ್ರಭುತ್ವವು ಆಹಾರವನ್ನು ಮೇಜಿನ ಮೇಲೆ ಇಡುವುದಿಲ್ಲ" ಎಂಬ ಅಮೆರಿಕದ ಸೆನೆಟರ್ ಎಲಿಸಾ ಸ್ಲಾಟ್ಕಿನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೈಶಂಕರ್, ಭಾರತ 800 ಮಿಲಿಯನ್ ಜನರಿಗೆ ಪೌಷ್ಟಿಕಾಂಶ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
"ಸೆನೆಟರ್, ಪ್ರಜಾಪ್ರಭುತ್ವವು ನಿಮ್ಮ ಮೇಜಿನಲ್ಲಿ ಆಹಾರ ಇಡುವುದಿಲ್ಲ (ಜೀವನ ನಿರ್ವಹಣೆ ಮಾಡುವುದಿಲ್ಲ) ಎಂದು ನೀವು ಹೇಳಿದ್ದೀರಿ. ವಾಸ್ತವವಾಗಿ, ನನ್ನ ಭಾಗದಲ್ಲಿ, ಅದು (ಪ್ರಜಾಪ್ರಭುತ್ವ) ಆಹಾರವನ್ನು ನೀಡುತ್ತದೆ. ಇಂದು, ನಾವು ಪ್ರಜಾಪ್ರಭುತ್ವ ಸಮಾಜವಾಗಿರುವುದರಿಂದ, ನಾವು ಪೌಷ್ಟಿಕಾಂಶ ಬೆಂಬಲವನ್ನು ಮತ್ತು 800 ಮಿಲಿಯನ್ ಜನರಿಗೆ ಆಹಾರವನ್ನು ನೀಡುತ್ತೇವೆ. ಅದು ಅವರು ಎಷ್ಟು ಆರೋಗ್ಯವಾಗಿದ್ದಾರೆ ಮತ್ತು ಅವರ ಹೊಟ್ಟೆ ಎಷ್ಟು ತುಂಬಿದೆ ಎಂಬುದರ ವಿಷಯವಾಗಿದೆ. ಆದ್ದರಿಂದ, ನಾನು ಹೇಳಲು ಬಯಸುವ ಅಂಶವೆಂದರೆ ಪ್ರಪಂಚದ ವಿವಿಧ ಭಾಗಗಳು ವಿಭಿನ್ನ ಸಂಭಾಷಣೆಗಳ ಮೂಲಕ ಸಾಗುತ್ತಿವೆ. ದಯವಿಟ್ಟು ಇದು ಒಂದು ರೀತಿಯ ಸಾರ್ವತ್ರಿಕ ವಿದ್ಯಮಾನ ಎಂದು ಭಾವಿಸಬೇಡಿ" ಎಂದು ಜೈಶಂಕರ್ ಅಮೇರಿಕಾದ ಸೆನೆಟರ್ ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.