ವಾಷಿಂಗ್ಟನ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ನಡುವೆ ಉಂಟಾಗಿರುವ ತೆರಿಗೆ ಮಸೂದೆ (One Big Beautiful Bill) ಸಮರ ತಾರಕಕ್ಕೇರಿದ್ದು, ಹೊಸ ಪಕ್ಷ ಕಟ್ಟುವುದಾಗಿ ಟ್ರಂಪ್ ಅವರಿಗೆ ಎಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ.
ಒಂದು ಕಾಲದಲ್ಲಿ ಡೊನಾಲ್ಡ್ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇದೀಗ ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮಸೂದೆಯನ್ನು ‘ಸಾಲ ಗುಲಾಮಗಿರಿ ಮಸೂದೆ’ ಎಂದು ಟೀಕಿಸಿರುವ ಮಸ್ಕ್ ಅವರು, ಅಮೆರಿಕ ಪಕ್ಷ’ (America Party) ಎಂಬ ಹೊಸ ರಾಜಕೀಯ ಪಾರ್ಟಿ ಕಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಅಂತಿಮ ಮತದಾನಕ್ಕೆ ಮುನ್ನ ಸೆನೆಟ್, ಟ್ರಂಪ್ ಅವರ ಮಸೂದೆ ಬಗ್ಗೆ ಚರ್ಚಿಸುತ್ತಿದ್ದ ಹೊತ್ತಲ್ಲೇ ಮಸ್ಕ್ ಈ ಹೇಳಿಕೆ ನೀಡಿದ್ದಾರೆ.
ಈ ಹುಚ್ಚು ಖರ್ಚು ಮಸೂದೆ ಅಂಗೀಕಾರವಾದರೆ ಮರುದಿನ ಅಮೆರಿಕ ಪಕ್ಷ ರಚನೆಯಾಗುತ್ತದೆ. ನಮ್ಮ ದೇಶಕ್ಕೆ ಡೆಮೋಕ್ರಾಟ್ ರಿಪಬ್ಲಿಕನ್ ಯುನಿ ಪಾರ್ಟಿಗೆ ಪರ್ಯಾಯ ಬೇಕಿದೆ. ಇದರಿಂದ ಜನರಿಗೆ ನಿಜವಾಗಿಯೂ ಧ್ವನಿ ಇರುತ್ತದೆ ಎಂದು ಮಸ್ಕ್ ಹೇಳಿದ್ದಾರೆ.
ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವುದಾಗಿ ಹೇಳಿ ಇದೀಗ ಇತಿಹಾಸದಲ್ಲಿಯೇ ಅತಿದೊಡ್ಡ ಸಾಲ ಹೆಚ್ಚಳದ ಮಸೂದೆ ಪರ ಮತ ಚಲಾಯಿಸಿರುವ ಪ್ರತಿಯೊಬ್ಬ ಸದಸ್ಯರು ನಾಚಿಕೆಯಿಂದ ತಲೆ ತಗ್ಗಿಸಬೇಕು. ಇವರೆಲ್ಲ ಮುಂದಿನ ವರ್ಷ ಚುನಾವಣೆಯಲ್ಲಿ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವಂತೆ ನಾನು ಮಾಡುತ್ತೇನೆ. ಹುಚ್ಚುತನದ ಖರ್ಚು ಮಸೂದೆ ಅಂಗೀಕಾರವಾದ ಮರುದಿನವೇ ಹೊಸ ಪಕ್ಷ ರಚನೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಮಸ್ಕ್ ಅವರ ಈ ಹೇಳಿಕೆಯು ಯುಎಸ್ ಅಧ್ಯಕ್ಷರೊಂದಿಗೆ ಅವರ ಸಂಬಂಧ ಬಿರುಕು ಬಿಟ್ಟಿರುವುದನ್ನು ಸ್ಪಷ್ಟಪಡಿಸಿದೆ. ಈ ಸಂದೇಶದ ಮೂಲಕ ಅವರು ಸೆನೆಟ್ ಸದಸ್ಯರಿಗೆ ಬಹಿರಂಗವಾಗಿಯೇ ಟ್ರಂಪ್ ಮಸೂದೆ ಪರ ಮತ ಚಲಾಯಿಸದಂತೆ ಬೆದರಿಕೆಯೊಡ್ಡಿದ್ದಾರೆ.
ಟ್ರಂಪ್ ಅವರ ಹೊಸ ಮಸೂದೆಯನ್ನು ಬೆಂಬಲಿಸುವ ಶಾಸಕರು ನಾಚಿಕೆಯಿಂದ ತಲೆ ತಗ್ಗಿಸಬೇಕು. ಒಂದು ವೇಳೆ ನಾನು ಈ ಭೂಮಿಯ ಮೇಲೆ ಮಾಡುವ ಕೊನೆಯ ಕೆಲಸ ಇದಾಗಿದ್ದರೆ ಮುಂದಿನ ವರ್ಷ ಅವರು ತಮ್ಮ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸೋಶಿಯನ್ ಮೀಡಿಯಾ ಟ್ರೂತ್'ನಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, ಸರ್ಕಾರಿ ಸಬ್ಸಿಡಿಗಳಿಲ್ಲದಿದ್ದರೆ ಟೆಸ್ಲಾ ಸಿಇಒ ಎಲೊನ್ ಮಸ್ಕ್ ಅವರ ಉದ್ಯಮ ಉಳಿಯಲು ಸಾಧ್ಯವಿಲ್ಲ. ಬಹುಶಃ ತಮ್ಮ ಉದ್ಯಮವನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹೋಗಬೇಕಾಗಿ ಬರಬಹುದು ಎಂದು ಹೇಳಿದ್ದರು.
ಎಲಾನ್ ಮಸ್ಕ್ ಅವರು ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬಲವಾಗಿ ಬೆಂಬಲಿಸುವ ಮೊದಲೇ, ನಾನು ಇವಿ ಮ್ಯಾಂಡೇಟ್ ನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಅವರಿಗೆ ತಿಳಿದಿತ್ತು. ಅದು ನನ್ನ ಅಭಿಯಾನದ ಭಾಗವಾಗಿತ್ತು. ಎಲೆಕ್ಟ್ರಿಕ್ ಕಾರುಗಳು ಪ್ರತಿಯೊಬ್ಬರೂ ಹೊಂದಬೇಕೆಂದು ಬಲವಂತ ಮಾಡಬಾರದು. ಹಿಂದೆ ಅವರು ಎಲ್ಲರಿಗಿಂತ ಹೆಚ್ಚು ಸಬ್ಸಿಡಿ ಪಡೆದಿರಬಹುದು. ಆದರೆ, ಇನ್ನು ಮುಂದೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದಿಲ್ಲ. ಸರ್ಕಾರದ ಸಬ್ಸಿಡಿ ಸಿಗದಿದ್ದರೆ ಬಹುಶಃ ಉದ್ಯಮ ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬೇಕಾಗಿ ಬರಬಹುದು. ಇನ್ನು ಮುಂದೆ ರಾಕೆಟ್ ಉಡಾವಣೆಗಳು, ಉಪಗ್ರಹಗಳು ಅಥವಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಇರುವುದಿಲ್ಲ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಮಸ್ಕ್ ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ್ದಾರೆ.
ಏನಿದು 'ಒನ್ ಬಿಗ್ ಬ್ಯೂಟಿಫುಲ್ ಬಿಲ್'?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಹೊಸ ವರಸೆ ತೆಗೆಯುತ್ತಿದ್ದು, ಅವರ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿವೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಹೊಸ ತೆರಿಗೆ ನೀತಿ, ಜಾಗತಿಕ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ.
ಈ ಮಧ್ಯೆ ಅಮೆರಿಕದ ಹಿತಾಸಕ್ತಿ ಕಾಪಾಡುವ ನೆಪದಲ್ಲಿ, ಡೊನಾಲ್ಡ್ ಟ್ರಂಪ್ ಅವರು "ಒನ್ ಬ್ಯೂಟಿಫುಲ್ ಬಿಲ್" ಎಂಬ ವಿಲಕ್ಷಣ ಮಸೂದೆಯನ್ನು ಜಾರಿಗೆ ತರಲು ಹೊರಟಿದ್ದಾರೆ. ಟ್ರಂಪ್ ಅವರ "ಒನ್ ಬಿಗ್ ಬ್ಯೂಟಿಫುಲ್ ಬಿಲ್" ಮೊದಲ ಅವಧಿಯ ತೆರಿಗೆ ಕಡಿತವನ್ನು 4.5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸಲು ಯೋಜನೆ ರೂಪಿಸಿದೆ. ಈ ಮೂಲಕ ಮಿಲಿಟರಿಗೆ ಹೆಚ್ಚಿನ ವೆಚ್ಚ ಮಾಡಲು ಟ್ರಂಪ್ ಬಯಸಿದ್ದಾರೆ.
ಇದರ ಮೂಲಕ ಟ್ರಂಪ್ ಅವರು ವಲಸೆ ಬಂದಿರುವವರ ಸಾಮೂಹಿಕ ಗಡೀಪಾರು ಮತ್ತು ಗಡಿ ಭದ್ರತೆಗಾಗಿ ಹೆಚ್ಚಿನ ಹಣಕಾಸು ಒದಗಿಸಲು ಬಯಸಿದ್ದಾರೆ. ಆದರೆ, ಇದು 2026ರಲ್ಲಿ ಮಧ್ಯಂತರ ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ದವಾಗಿರುವ ಸೆನೆಟರ್‌ಗಳಿಗೆ ಸಂಕಷ್ಟ ತಂದೊಡ್ಡಿದೆ.