ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಗೌರವವಾದ 'ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್' ನ್ನು ಪ್ರದಾನ ಮಾಡಲಾಯಿತು.
ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಭಾರತ-ಬ್ರೆಜಿಲ್ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ಮೋದಿ ನೀಡಿದ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಈ ಗೌರವವನ್ನು ಪ್ರದಾನ ಮಾಡಿದರು.
ಅಧ್ಯಕ್ಷರು ಇಂದು ಬ್ರೆಜಿಲ್‌ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ನನಗೆ ಮಾತ್ರವಲ್ಲ, 140 ಕೋಟಿ ಭಾರತೀಯರಿಗೂ ಅಪಾರ ಹೆಮ್ಮೆ ಮತ್ತು ಭಾವನೆಯ ಕ್ಷಣವಾಗಿದೆ" ಎಂದು ಮೋದಿ ಅವರು ತಮ್ಮ ನಿಯೋಗ ಮಟ್ಟದ ಮಾತುಕತೆಯ ನಂತರ ಲೂಲಾ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷ ಲೂಲಾ, ಬ್ರೆಜಿಲ್ ಸರ್ಕಾರ ಮತ್ತು ಬ್ರೆಜಿಲ್ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ, ಇದು ಬ್ರೆಜಿಲ್ ಜನರು ಭಾರತದ ಜನರ ಮೇಲೆ ಹೊಂದಿರುವ ಬಲವಾದ ವಾತ್ಸಲ್ಯವನ್ನು ವಿವರಿಸುತ್ತದೆ. ನಮ್ಮ ಸ್ನೇಹವು ಮುಂಬರುವ ದಿನಗಳಲ್ಲಿ ಯಶಸ್ಸಿನ ಹೊಸ ಎತ್ತರವನ್ನು ಏರಲಿ ಎಂದರು.
ಅಧ್ಯಕ್ಷ ಲೂಲಾ ಅವರು ಭಾರತ-ಬ್ರೆಜಿಲ್ ಕಾರ್ಯತಂತ್ರದ ಸಹಭಾಗಿತ್ವದ ಶಿಲ್ಪಿ ಎಂದು ಮೋದಿ ಹೇಳಿದ್ದಾರೆ, ಈ ಪ್ರಶಸ್ತಿಯು ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಅವರು ಮಾಡಿದ ಅವಿಶ್ರಾಂತ ಪ್ರಯತ್ನಗಳಿಗೆ ಸಂದ ಗೌರವವಾಗಿದೆ ಎಂದು ವಿದೇಶಾಂಗ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪ್ರಶಸ್ತಿಯು ಎರಡೂ ದೇಶಗಳ ಜನರು ತಮ್ಮ ಆತ್ಮೀಯ ಮತ್ತು ಸ್ನೇಹಪರ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಮೇ 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿ ಅವರಿಗೆ ನೀಡಿದ 26 ನೇ ಅಂತಾರಾಷ್ಟ್ರೀಯ ಗೌರವ ಇದಾಗಿದೆ.