ಕಾಬುಲ್: 45 ವರ್ಷದ ವ್ಯಕ್ತಿ 6 ವರ್ಷದ ಪುಟ್ಟ ಬಾಲಕಿಯನ್ನು ಮದುವೆಯಾಗಿರುವ ವಿಚಾರ ಆಫ್ಘಾನಿಸ್ತಾನದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವಂತೆಯೇ ಅಲ್ಲಿನ ಆಡಳಿತಾರೂಢ ತಾಲಿಬಾನ್ ಬಾಲಕಿಗೆ 9 ವರ್ಷ ಆಗುವವರೆಗೂ ಕಾಯುವಂತೆ ಆಕೆ ಪತಿಗೆ ಸೂಚನೆ ನೀಡಿದೆ.
ಹೌದು.. ದಕ್ಷಿಣ ಅಫ್ಘಾನಿಸ್ತಾನದ ಮಾರ್ಜಾ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯನ್ನು 45 ವರ್ಷದ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂಬ ಸುದ್ದಿ ಆಫ್ಘಾನಿಸ್ತಾನದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ದೇಶ-ವಿದೇಶಗಳ ಮಾನವಹಕ್ಕು ಸಂಘಸಂಸ್ಥೆಗಳು ಇದರ ವಿರುದ್ಧ ಧನಿ ಎತ್ತಿವೆ.
ಹೀಗಿರುವಂತೆಯೇ ಪುಟ್ಟ ಬಾಲಕಿಯನ್ನು ಮದುವೆಯಾಗಿದ್ದ ವ್ಯಕ್ತಿಗೆ ಅಲ್ಲಿನ ತಾಲಿಬಾನ್ ಸರ್ಕಾರ ವಿಲಕ್ಷಣ ಸೂಚನೆ ನೀಡಿದ್ದು, ಬಾಲಕಿಗೆ 9 ವರ್ಷ ವಯಸ್ಸಾಗುವವರೆಗೂ ಕಾಯುವಂತೆ ಸೂಚನೆ ನೀಡಿದೆ.
ಹಣ ನೀಡಿ ಬಾಲಕಿ ಖರೀದಿ!
ಇನ್ನು ಅಮೆರಿಕ ಮೂಲದ ಅಫ್ಘಾನ್ ಮಾಧ್ಯಮ Amu.tv ವರದಿ ಮಾಡಿರುವಂತೆ ಇಬ್ಬರು ಪತ್ನಿಯರನ್ನು ಹೊಂದಿರುವ ಆ 45 ವರ್ಷದ ವ್ಯಕ್ತಿ ಮಗುವಿನ ಕುಟುಂಬಕ್ಕೆ ಮದುವೆಗಾಗಿ ಹಣ ನೀಡಿದ್ದಾನೆ ಎನ್ನಲಾಗಿದೆ. ಹಣ ನೀಡಿ 6 ವರ್ಷದ ಬಾಲಕಿಯನ್ನು ಮದುವೆಗಾಗಿ ಖರೀದಿ ಮಾಡಿದ್ದಾನೆ ಎಂದು ವರದಿ ಮಾಡಿದೆ.
ಈ ವಿಲಕ್ಷಣ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತ ಸ್ಥಳೀಯ ಪೊಲೀಸರು ಮಾರ್ಜಾ ಜಿಲ್ಲೆಯಲ್ಲಿ 45 ವರ್ಷದ ವರ ಮತ್ತು ಬಾಲಕಿಯ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಈ ಇಬ್ಬರ ವಿರುದ್ಧ ಅಥವಾ ಈ ವಿಲಕ್ಷಣ ಮದುವೆಯ ವಿರುದ್ಧ ಯಾರೂ ದೂರು ದಾಖಲಿಸದ ಕಾರಣ ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಬಾಲಕಿ ಪ್ರಸ್ತುತ ಆಕೆಯ ಪೋಷಕರ ಮನೆಯಲ್ಲೇ ಇದ್ದಾಳೆ ಎನ್ನಲಾಗಿದೆ.
ಏನಿದು walwar ಸಂಪ್ರದಾಯ?
ಆಫ್ಘಾನಿಸ್ತಾನ ಬುಡಕಟ್ಟು ವಿವಾಹ ವ್ಯವಸ್ಥೆಯಲ್ಲಿ ವಧುವನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು walwar ಎನ್ನಲಾಗುತ್ತದೆ. ಅಲ್ಲಿ ವರದಕ್ಷಿಣೆ ಪರ್ಯಾಯವಾಗಿ ವಧುದಕ್ಷಿಣೆ ನೀಡಲಾಗುತ್ತದೆ. ಅಲ್ಲಿ ಹುಡುಗಿಯ ದೈಹಿಕ ನೋಟ, ಶಿಕ್ಷಣ ಮತ್ತು ಗ್ರಹಿಸಿದ ಮೌಲ್ಯವನ್ನು ಆಧರಿಸಿ ವಧುವಿನ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಹೀಗೆ ಆಯ್ಕೆಯಾದ ವಧುವಿನ ಪೋಷಕರಿಗೆ ಹಣ ನೀಡಿ ವಧುವನ್ನು ಮದುವೆ ಮಾಡಿಕೊಳ್ಳಲಾಗುತ್ತದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ಹಶ್ತ್-ಇ ಸುಭ್ ಡೈಲಿ ವರದಿ ಮಾಡಿದೆ.
ಆಕ್ರೋಶದ ಬೆನ್ನಲ್ಲೇ ತಾಲಿಬಾನಿ ನಾಯಕರ ಸೂಚನೆ
ಇನ್ನು 45ರ ವ್ಯಕ್ತಿ 6 ರ ಬಾಲಕಿಯನ್ನು ವಿವಾಹವಾದ ವಿಚಾರ ವ್ಯಾಪಕ ಆಕ್ರೋಶಕ್ಕೆ ತುತ್ತಾಗುತ್ತಿದ್ದಂತೆಯೇ ಎಚ್ಚೆತ್ತ ಸ್ಥಳೀಯ ತಾಲಿಬಾನ್ ನಾಯಕರು ಈ ಸಂಬಂಧ ರಾಜಿ ಸಭೆ ನಡೆಸಿ ಅಲ್ಲಿ ಬಾಲಕಿಗೆ 9 ವರ್ಷಗಳಾಗುವವರೆಗೂ ಕಾಯುವಂತೆ ವರನಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬಾಲಕಿಗೆ 9 ವರ್ಷಗಳಾದ ಬಳಿಕ ಆಕೆಯನ್ನು ಗಂಡನ ಮನೆಗೆ ಕರೆದೊಯ್ಯಬಹುದು ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.