ಢಾಕಾ: ಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್ (Bangladesh Plane Crash) ಅಪಘಾತಕ್ಕೀಡಾಗಿದೆ. ಸೋಮವಾರ ರಾಜಧಾನಿ ಢಾಕಾದಲ್ಲಿ ಚೀನಾ (China) ನಿರ್ಮಿತ F-7 BGI ವಿಮಾನ ಅಪಘಾತಕ್ಕೀಡಾಗಿದ್ದು 20 ಮಂದಿ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ 1:06ಕ್ಕೆ ವಿಮಾನ ಟೇಕ್ ಆಫ್ ಆಗಿದ್ದ ಸ್ವಲ್ಪ ಸಮಯದ ನಂತರ ಉತ್ತರದಲ್ಲಿ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.
ಆರಂಭಿಕ ವರದಿಗಳು ವಿಮಾನವು ಮೈಲ್‌ಸ್ಟೋನ್ ಕಾಲೇಜಿನ ಕ್ಯಾಂಟೀನ್‌ನ ಛಾವಣಿಯ ಮೇಲೆ ಬಿದ್ದಿದೆ. ವಿಮಾನವು ಇದ್ದಕ್ಕಿದ್ದಂತೆ ದೊಡ್ಡ ಶಬ್ದದೊಂದಿಗೆ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭಯಭೀತರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕಟ್ಟಡವನ್ನು ಪ್ಲೇಗ್ರೂಪ್ ತರಗತಿಗಳಿಗೆ ಬಳಸಲಾಗುತ್ತಿತ್ತು. ವಿಮಾನ ಪತನದಲ್ಲಿ 20 ಮಂದಿ ಸಾವನ್ನಪ್ಪಿದ್ದು 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಪರಿಸ್ಥಿತಿ ಗಂಭೀರವಾಗಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಉತ್ತರ ವಿಭಾಗದ ಉಪ ಆಯುಕ್ತ ಮೊಹಿದುಲ್ ಇಸ್ಲಾಂ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ವಾಯುಪಡೆಯ ತರಬೇತಿ ವಿಮಾನ ಅಪಘಾತಕ್ಕೀಡಾದ ನಂತರ ಸ್ಥಳೀಯ ಆಡಳಿತವು ಸ್ಥಳದಲ್ಲಿದೆ ಎಂದು ಹೇಳಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದರು.
ದಿಯಾಬರಿಯಲ್ಲಿ ನಡೆದ ಅಪಘಾತದ ನಂತರ ಮಧ್ಯಾಹ್ನ 1:30ಕ್ಕೆ ನಾಲ್ವರು ಗಾಯಾಳುಗಳನ್ನು ಮಿಲಿಟರಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಅಗ್ನಿಶಾಮಕ ದಳದ ಕರ್ತವ್ಯ ಅಧಿಕಾರಿ ಲಿಮಾ ಖಾನ್ ಪ್ರೋಥೊಮಾಲೊಗೆ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಮೂರು ಘಟಕಗಳು ಇನ್ನೂ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಗಾಯಾಳುಗಳನ್ನು ಢಾಕಾ (Dhaka) ವೈದ್ಯಕೀಯ ಕಾಲೇಜು ಆಸ್ಪತ್ರೆ, ಕುರ್ಮಿಟೋಲಾ ಜನರಲ್ ಆಸ್ಪತ್ರೆ, ಕುವೈತ್ ಬಾಂಗ್ಲಾದೇಶ ಸ್ನೇಹ ಸರ್ಕಾರಿ ಆಸ್ಪತ್ರೆ, ಉತ್ತರ ಮಹಿಳಾ ವೈದ್ಯಕೀಯ ಕಾಲೇಜು ಮತ್ತು ಶಹೀದ್ ಮನ್ಸೂರ್ ಅಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಾಂಗ್ಲಾದೇಶ ರಾಜಧಾನಿಯಲ್ಲಿ ಅಪಘಾತಕ್ಕೀಡಾದ F-7 BGI ಚೀನಾದಲ್ಲಿ ತಯಾರಾದ ಬಹು-ಪಾತ್ರದ ಯುದ್ಧ ವಿಮಾನವಾಗಿದೆ. ಇದು ಬಾಂಗ್ಲಾದೇಶ ವಾಯುಪಡೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ F-7 (MiG-21 ನ ರೂಪಾಂತರ) ನ ಸುಧಾರಿತ ಆವೃತ್ತಿಯಾಗಿದೆ. ಇದನ್ನು F-7 ಸರಣಿಯ ಅತ್ಯಂತ ಮುಂದುವರಿದ ಆವೃತ್ತಿ ಎಂದು ಪರಿಗಣಿಸಲಾಗಿದೆ. ಬಾಂಗ್ಲಾದೇಶ ಅಪಘಾತವು ಈ ಚೀನೀ ಮೂಲದ ವಿಮಾನದ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತವಾಗಿದೆ.