ಪೇಶಾವರ: ಪಾಕಿಸ್ತಾನದಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜೂನ್ 26 ರಿಂದ 126 ಮಕ್ಕಳು ಸೇರಿದಂತೆ ಕನಿಷ್ಠ 266 ಜನರು ಸಾವಿಗೀಡಾಗಿದ್ದು, 628 ಜನರು ಗಾಯಗೊಂಡಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ಶುಕ್ರವಾರ ತಿಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತನ್ನ ಇತ್ತೀಚಿನ ವರದಿಯಲ್ಲಿ, ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 14 ಜನರು ಸಾವಿಗೀಡಾಗಿದ್ದಾರೆ ಮತ್ತು 17 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಒಟ್ಟು ಮೃತಪಟ್ಟವರ ಪೈಕಿ 94 ಪುರುಷರು, 46 ಮಹಿಳೆಯರು ಮತ್ತು 126 ಮಕ್ಕಳು ಸೇರಿದ್ದಾರೆ. ಪಂಜಾಬ್‌ನಲ್ಲಿ ಅತಿ ಹೆಚ್ಚು 144 ಸಾವುನೋವುಗಳು ಸಂಭವಿಸಿವೆ. ನಂತರ ಖೈಬರ್ ಪಖ್ತುಂಖ್ವಾದಲ್ಲಿ 63, ಸಿಂಧ್‌ನಲ್ಲಿ 25, ಬಲೂಚಿಸ್ತಾನದಲ್ಲಿ 16, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 10 ಮತ್ತು ಇಸ್ಲಾಮಾಬಾದ್‌ನಲ್ಲಿ ಎಂಟು ಸಾವುನೋವುಗಳು ಸಂಭವಿಸಿವೆ.
ಪಂಜಾಬ್‌ನಲ್ಲಿ 488, ಖೈಬರ್ ಪಖ್ತುಂಖ್ವಾದಲ್ಲಿ 69, ಸಿಂಧ್‌ನಲ್ಲಿ 40, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 18, ಬಲೂಚಿಸ್ತಾನದಲ್ಲಿ ನಾಲ್ಕು ಮತ್ತು ಇಸ್ಲಾಮಾಬಾದ್‌ನಲ್ಲಿ ಮೂವರಿಗೆ ಗಾಯಗಳಾಗಿವೆ.
ಭಾರಿ ಮಳೆ ಮತ್ತು ಹಠಾತ್ ಪ್ರವಾಹವು ಆಸ್ತಿ ಮತ್ತು ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ. ಕಳೆದ 24 ಗಂಟೆಗಳಲ್ಲಿ, 246 ಮನೆಗಳು ಹಾನಿಗೊಳಗಾಗಿದ್ದು, 38 ಜಾನುವಾರುಗಳು ಸಾವಿಗೀಡಾಗಿವೆ. ಮಾನ್ಸೂನ್ ಆರಂಭವಾದಾಗಿನಿಂದ, 1,250 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಮತ್ತು 366 ಪ್ರಾಣಿಗಳು ಮೃತಪಟ್ಟಿವೆ.
ತರ್ಬೇಲಾ ಅಣೆಕಟ್ಟಿನ ಹೊರಹರಿವಿನಿಂದ ಸಿಂಧೂ ನದಿ ಉಬ್ಬರ ಹೆಚ್ಚುತ್ತಿರುವ ಕಾರಣ, ಅಟಾಕ್‌ನ ಚಾಚ್‌ನಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿನಿಯೋಟ್‌ನಲ್ಲಿ, ಚೆನಾಬ್ ನದಿಯಲ್ಲಿ ಕಡಿಮೆ ಮಟ್ಟದ ಪ್ರವಾಹ ವರದಿಯಾಗಿದೆ.
ಹರಿಪುರದ ಖಾನ್ಪುರ್ ತಹಸಿಲ್‌ನಲ್ಲಿ ಭೂಕುಸಿತದಿಂದಾಗಿ ಹಲವಾರು ಮನೆಗಳಿಗೆ ಹಾನಿಯುಂಟಾಗಿದೆ. ಭಾರಿ ಕುಸಿತದಿಂದಾಗಿ ಹಾಲಿ ಬಾಗ್ ಕಲಾಲಿಯಲ್ಲಿ ಎರಡು ದಿನಗಳ ಕಾಲ ರಸ್ತೆ ಮುಚ್ಚಿಹೋಗಿತ್ತು, ಇದರಿಂದಾಗಿ ಪರಿಹಾರ ಕಾರ್ಯಗಳು ವಿಳಂಬವಾದವು.
ಸ್ವಾತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಮುಂದುವರೆದಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಎಂಟು ಮಂದಿ ಸಾವಿಗೀಡಾಗಿದ್ದಾರೆ ಮತ್ತು 10ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.
ಟಟ್ಟಾ ಪಾನಿ ಬಳಿ ದೊಡ್ಡ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಮತ್ತು ಪ್ರಾಂತೀಯ ಅಧಿಕಾರಿಗಳೊಂದಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಂಘಟಿಸುತ್ತಿರುವುದಾಗಿ ಎನ್‌ಡಿಎಂಎ ತಿಳಿಸಿದೆ.