ವಿಶ್ವಸಂಸ್ಥೆ: ಇಸ್ರೇಲ್-ಇರಾನ್ ನಡುವಿನ ಸಂಘರ್ಷದಲ್ಲಿ ಇದೀಗ ಇಸ್ರೇಲ್'ಗೆ ಬೆಂಬಲ ವ್ಯಕ್ತಪಡಿಸಿ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿರುವ ಮೂಲಕ ಯುದ್ಧದಲ್ಲಿ ಅಮೆರಿಕಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಇರಾನ್ ಅಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿರುವ ಕುರಿತು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಪ್ರತಿಕ್ರಿಯೆ ನೀಡಿದ್ದಾರೆ.
ಇರಾನ್ ಮೇಲೆ ಅಮೆರಿಕಾ ನಡೆಸಿರುವ ದಾಳಿಯನ್ನು ಅಪಾಯಕಾರಿ ಬೆಳವಣಿಗೆ ಎಂದು ಅವರು ಕರೆದಿದ್ದಾರೆ. ಅಲ್ಲದೆ, ಇದು ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು "ನಿಯಂತ್ರಣ ತಪ್ಪಬಹುದು" ಎಂದೂ ಎಚ್ಚರಿಕೆ ನೀಡಿದ್ದಾರೆ.
ಇರಾನ್ ವಿರುದ್ಧ ಅಮೆರಿಕಾ ಬಲಪ್ರಯೋಗ ತೀವ್ರ ಆಘಾತ ತಂದಿದೆ. ಈಗಾಗಲೇ ಸಂಘರ್ಷದಲ್ಲಿರುವ ಪ್ರದೇಶದಲ್ಲಿ ಈ ಬೆಳವಣಿಗೆ ಪರಿಸ್ಥಿತಿ ನಿಯಂತ್ರಣ ತಪ್ಪುವಂತೆ ಮಾಡಲಿದೆ. ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.
ಈ ಸಂಘರ್ಷವು ನಿಯಂತ್ರಣ ತಪ್ಪುವ ಅಪಾಯವನ್ನು ಹೆಚ್ಚಿಸುತ್ತಿದೆ. ನಾಗರಿಕರ ಮತ್ತು ಜಗತ್ತಿನ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಸದಸ್ಯ ರಾಷ್ಟ್ರಗಳು ಉಲ್ಬಣವನ್ನು ಕಡಿಮೆ ಮಾಡಲು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಇತರ ನಿಯಮಗಳ ಅಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಎತ್ತಿಹಿಡಿಯಬೇಕು. ಈ ಅಪಾಯಕಾರಿ ಸಮಯದಲ್ಲಿ ಅವ್ಯವಸ್ಥೆಯ ಸುರುಳಿಯನ್ನು ತಪ್ಪಿಸುವುದು ನಿರ್ಣಾಯಕವಾಗಿದೆ. ಇದಕ್ಕೆ ಯಾವುದೇ ಸೇನಾ ಪರಿಹಾರವಿಲ್ಲ. ಮುಂದಿನ ಏಕೈಕ ಮಾರ್ಗ ರಾಜತಾಂತ್ರಿಕತೆಯಾಗಿದೆ ಎಂದು ತಿಳಿಸಿದ್ದಾರೆ.