ವಾಷಿಂಗ್ಟನ್: ವೀಸಾ ಸ್ಕ್ರೀನಿಂಗ್ ಕಾರ್ಯವಿಧಾನಗಳನ್ನು ಮತ್ತಷ್ಟು ಕಠಿಣಗೊಳಿಸಲು ಮುಂದಾಗಿರುವ ಅಮೆರಿತ, ತಕ್ಷಣದಿಂದ ಜಾರಿಗೆ ಬರುವಂತೆ, F, M, ಅಥವಾ J ವಲಸೆರಹಿತ ವೀಸಾಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ವ್ಯಕ್ತಿಗಳು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ಗೌಪ್ಯತಾ ಸೆಟ್ಟಿಂಗ್‌ಗಳನ್ನು ''ಪಬ್ಲಿಕ್'' ಅಥವಾ ಅನ್ ಲಾಕ್ ಮಾಡಬೇಕು ಎಂದು ಯುನೈಟೆಡ್ ಸ್ಟೇಟ್ಸ್ ಘೋಷಿಸಿದೆ. ಇದು US ಕಾನೂನಿನಡಿಯಲ್ಲಿ ಅವರ ಗುರುತು ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಪ್ರವೇಶಕ್ಕೆ ಅಗತ್ಯವಾದ ಪರಿಶೀಲನೆಯನ್ನು ಸುಗಮಗೊಳಿಸುತ್ತದೆ.
ಈ ಕುರಿತು ಭಾರತದಲ್ಲಿನ US ರಾಯಭಾರ ಕಚೇರಿಯ ಅಧಿಕೃತ ಹ್ಯಾಂಡಲ್(@USAndIndia 'ಪ್ರತಿ ವೀಸಾ ತೀರ್ಪು ರಾಷ್ಟ್ರೀಯ ಭದ್ರತಾ ನಿರ್ಧಾರವಾಗಿದೆ' ಎಂದು ಹೇಳುವ ಪ್ರಕಟಣೆಯನ್ನು ಹಂಚಿಕೊಂಡಿದೆ.
ತಕ್ಷಣದಿಂದ ಜಾರಿಗೆ ಬರುವಂತೆ, F, M, ಅಥವಾ J ವಲಸೆರಹಿತ ವೀಸಾಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವ ಎಲ್ಲಾ ವ್ಯಕ್ತಿಗಳು ತಮ್ಮ ಗುರುತು ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಪ್ರವೇಶಕ್ಕೆ ಅಗತ್ಯವಾದ ಪರಿಶೀಲನೆಯನ್ನು ಸುಗಮಗೊಳಿಸಲು ತಮ್ಮ ಎಲ್ಲಾ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ಗೌಪ್ಯತಾ ಸೆಟ್ಟಿಂಗ್‌ಗಳನ್ನು 'ಅನ್ ಲಾಕ್' ಮಾಡಲು ವಿನಂತಿಸಲಾಗಿದೆ.
ವೀಸಾಗೆ ಹೊಸದಾಗಿ ಅರ್ಜಿ ಸಲ್ಲಿಸುವವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಆ ಮೂಲಕ ಪರಿಶೀಲನೆಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಅಂಥವರ ವೀಸಾ ಅರ್ಜಿ ತಿರಸ್ಕೃತವಾಗುತ್ತದೆ ಎಂದು ಅಮೆರಿಕ ಪ್ರಕಟಣೆಯಲ್ಲಿ ತಿಳಿಸಿದೆ.
'ನಮ್ಮ ವೀಸಾ ಸ್ಕ್ರೀನಿಂಗ್ ಮತ್ತು ಪರಿಶೀಲನೆಯಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಬಳಸಿಕೊಂಡು ಅಮೆರಿಕಕ್ಕೆ ಪ್ರವೇಶವಿಲ್ಲದ ವೀಸಾ ಅರ್ಜಿದಾರರನ್ನು ಗುರುತಿಸುತ್ತೇವೆ. ಇದರಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟುಮಾಡುವವರು ಸೇರಿದ್ದಾರೆ' ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
2019 ರಿಂದ, ಯುನೈಟೆಡ್ ಸ್ಟೇಟ್ಸ್ ವೀಸಾ ಅರ್ಜಿದಾರರು ವಲಸೆ ಮತ್ತು ವಲಸೆರಹಿತ ವೀಸಾ ಅರ್ಜಿ ನಮೂನೆಗಳಲ್ಲಿ ಸಾಮಾಜಿಕ ಮಾಧ್ಯಮ ಗುರುತಿಸುವಿಕೆಗಳನ್ನು ಒದಗಿಸಬೇಕಾಗುತ್ತದೆ ಎಂದು ಅದು ಪುನರುಚ್ಚರಿಸಿದೆ.
ಏತನ್ಮಧ್ಯೆ, ಅಮೆರಿಕ ಸರ್ಕಾರವು 2025 ರ ಹೊಸ ಪ್ರಯಾಣ ನಿಷೇಧವನ್ನು ಸಹ ಅನಾವರಣಗೊಳಿಸಿದ್ದು, ಇದು 12 ದೇಶಗಳ ಪ್ರಜೆಗಳಿಗೆ ನಿಷೇಧ ಮತ್ತು ಇತರ ಏಳು ದೇಶಗಳ ಪ್ರಜೆಗಳಿಗೆ ವೀಸಾ ಪ್ರವೇಶವನ್ನು ಸಂಪೂರ್ಣವಾಗಿ ಮತ್ತು ಭಾಗಶಃ ಸೀಮಿತಗೊಳಿಸಲಾಗಿದೆ.