ರೋಮ್: ಎರಡು ವಾರಗಳಿಂದ ನ್ಯುಮೋನಿಯಾದಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಶುಕ್ರವಾರ ಆಗಾಗ್ಗೆ ಕೆಮ್ಮುವಿನಿಂದ ವಾಂತಿಯಾಗಿದೆ. ಉಸಿರಾಟದ ತೊಂದರೆಯಿಂದ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ವ್ಯಾಟಿಕನ್ ಹೇಳಿದೆ.
88 ವರ್ಷದ ಪೋಪ್ ಅವರು ಜಾಗೃತರಾಗಿದ್ದು, ಎಲ್ಲಾ ವೇಳೆಯಲ್ಲಿಯೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಉತ್ತಮ ಮಟ್ಟದ ಆಮ್ಲಜನಕ ವಿನಿಮಯದೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಹೆಚ್ಚುವರಿ ಆಮ್ಲಜನಕ ಪಡೆಯಲು ಮಾಸ್ಕ್ ಧರಿಸುವುದನ್ನು ಮುಂದುವರೆಸಿದ್ದಾರೆ ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ.
ಮಧ್ಯಾಹ್ನದ ಆರಂಭದಲ್ಲಿ ಸಂಭವಿಸಿದ ಉಸಿರಾಟದ ತೊಂದರೆಯಿಂದ ಆರೋಗ್ಯದಲ್ಲಿ ಮತ್ತಷ್ಟು ಹದಗೆಟ್ಟಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆಯೇ ಎಂಬುದರ ಬಗ್ಗೆ ಮುಂದಿನ 24 ರಿಂದ 48 ಗಂಟೆ ಅವಧಿ ವೈದ್ಯರು ತೀವ್ರ ನಿಗಾ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ. 14 ರಿಂದ ರೋಮ್‌ನ ಜೆಮೆಲ್ಲಿ ಆಸ್ಪತ್ರೆಯಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೋಪ್ ಅವರು ಯುವಕನಾಗಿದ್ದಾಗ ಶ್ವಾಸಕೋಶದ ಕಾಯಿಲೆಯಿಂದಾಗಿ ಒಂದು ಶ್ವಾಸಕೋಶದ ಭಾಗವನ್ನು ತೆಗೆದುಹಾಕಲಾಗಿದೆ. ಬ್ರಾಂಕೈಟಿಸ್ ಉಲ್ಬಣಗೊಂಡು ಎರಡೂ ಶ್ವಾಸಕೋಶಗಳಲ್ಲಿ ನ್ಯುಮೋನಿಯಾ ಉಂಟಾಗಿದೆ.
ಎರಡು ವಾರಗಳಿಗೂ ಹೆಚ್ಚು ಕಾಲದಿಂದ ಆಸ್ಪತ್ರೆಯಲ್ಲಿರುವ ಪೋಪ್ ಅವರು ಈಗ ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಮಟ್ಟದ ಕೃತಕ ಉಸಿರಾಟದ ಅವಶ್ಯಕತೆಯಿದೆ ಎಂದು ಭಾವಿಸುತ್ತೇನೆ ಎಂದು ಚಿಕಾಗೋದ ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನ ಶ್ವಾಸಕೋಶದ ಕ್ರಿಟಿಕಲ್ ಕೇರ್ ವೈದ್ಯ ಡಾ. ಜಾನ್ ಕೋಲ್‌ಮನ್ ಅವರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.