ನ್ಯೂಯಾರ್ಕ್: ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ಬಳಿಕ ಡೋನಾಲ್ಡ್ ಟ್ರಂಪ್ ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ನಿರ್ಗಮಿಸಿರುವ ಅಮೆರಿಕ, ಈಗ ವಿಶ್ವಸಂಸ್ಥೆ ಮತ್ತು ನ್ಯಾಟೋ (NATO) ದಿಂದಲೂ ನಿರ್ಗಮಿಸುವ ಸುಳಿವು ನೀಡಿದೆ.
ಇದಕ್ಕೆ ಪೂರಕವಾಗಿ ವಿಶ್ವಸಂಸ್ಥೆ (UN) ಮತ್ತು ನ್ಯಾಟೋದಿಂದ ಅಮೆರಿಕ ನಿರ್ಗಮಿಸುವುದಾದರೆ ನನ್ನ ಬೆಂಬಲವಿದೆ ಎಂದು ಬಿಲಿಯೇನಿಯರ್ ಮತ್ತು ಅಮೆರಿಕದ ದಕ್ಷತೆ ಇಲಾಖೆ (DOGE) ಮುಖ್ಯಸ್ಥ ಎಲೋನ್ ಮಸ್ಕ್ ಹೇಳಿದ್ದಾರೆ.
ಯುಎಸ್ ಎರಡೂ ಸಂಸ್ಥೆಗಳನ್ನು ತೊರೆಯುವ ಸಮಯ ಬಂದಿದೆ ಎಂಬ X ಬಳಕೆದಾರರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮಸ್ಕ್ "ನಾನು ಒಪ್ಪುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಬೆಳೆಸುವ ಮೂಲಕ ಭವಿಷ್ಯದ ಪೀಳಿಗೆಯನ್ನು ಯುದ್ಧದ ಭೀಕರತೆಯಿಂದ ರಕ್ಷಿಸಲು ವಿಶ್ವಸಂಸ್ಥೆಯ ಸಂಸ್ಥೆ (UNO) ಅನ್ನು ರಚಿಸಲಾಗಿದೆ. ಅಕ್ಟೋಬರ್ 24, 1945 ರಂದು ಸ್ಥಾಪನೆಯಾದ ಸ್ವಾಯತ್ತ ಮತ್ತು ಸ್ವತಂತ್ರ ರಾಜ್ಯಗಳ ಜಾಗತಿಕ ಸಂಘಟನೆಯಾಗಿದ್ದು, ಇದರ ರಚನೆ ಮತ್ತು ಕಾರ್ಯನಿರ್ವಹಣೆಯಲ್ಲಿ ಅಮೆರಿಕದ ಪಾತ್ರ ಮಹತ್ವದ್ದಾಗಿದೆ.
ಒಂದು ವೇಳೆ ಸದಸ್ಯ ರಾಷ್ಟ್ರಗಳು ರಕ್ಷಣಾ ಬಜೆಟ್ ಹೆಚ್ಚಿಸುವಲ್ಲಿ ವಿಫಲವಾದರೆ ನ್ಯಾಟೋದಿಂದ ಅಮೆರಿಕ ನಿರ್ಗಮಿಸುವುದನ್ನು ಸಂಪೂರ್ಣವಾಗಿ ಪರಿಗಣಿಸುವುದಾಗಿ ಡಿಸೆಂಬರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು.
ನ್ಯಾಟೋ(NATO) ವಿಶ್ವದ 32 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ ಅಥವಾ ಒಕ್ಕೂಟ ಎಂದು ಕೂಡಾ ಕರೆಯಲಾಗುತ್ತದೆ. ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ, ಸಾರ್ವಭೌಮತೆ ಹಾಗೂ ಭದ್ರತೆಯನ್ನು ಕಾಪಾಡುವುದು ಈ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ.