ವಾಷಿಂಗ್ಟನ್: ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆಯನ್ನು ರದ್ದುಗೊಳಿಸುವುದಾಗಿ ಅಮೆರಿಕ ಶುಕ್ರವಾರ ಹೇಳಿದ್ದು, ಅವರಿಗೆ ದೇಶ ತೊರೆಯಲು ವಾರಗಳ ಕಾಲಾವಕಾಶ ನೀಡಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಅಭಿಯಾನವನ್ನು ಕೈಗೊಳ್ಳುವುದಾಗಿ ಮತ್ತು ಮುಖ್ಯವಾಗಿ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಿಂದ ಅಕ್ರಮ ವಲಸೆ ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಈ ಆದೇಶವು ಅಕ್ಟೋಬರ್ 2022ರ ನಂತರ ಅಮೆರಿಕ್ಕೆ ಬಂದಿರುವ ಕ್ಯೂಬಾ, ಹೈಟಿ, ನಿಕರಾಗುವಾ ಮತ್ತು ವೆನೆಜುವೆಲಾ ಸೇರಿದಂತೆ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಅನ್ವಯಿಸುತ್ತದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ಹೇಳಿದ್ದಾರೆ.
ಈ ನಾಲ್ಕು ದೇಶದ ಲಕ್ಷಾಂತರ ನಾಗರಿಕರು ಏಪ್ರಿಲ್ 24ರಂದು ಅಥವಾ ಫೆಡರಲ್ ರಿಜಿಸ್ಟರ್‌ನಲ್ಲಿ ನೋಟಿಸ್ ಪ್ರಕಟವಾದ 30 ದಿನಗಳಲ್ಲಿ ಅಮೆರಿಕದಲ್ಲಿ ಉಳಿಯುವ ತಮ್ಮ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲಿದ್ದಾರೆ.
ಈ ಹೊಸ ಆದೇಶವು ಈಗಾಗಲೇ ಅಮೆರಿಕದಲ್ಲಿರುವ ಮತ್ತು ಮಾನವೀಯ ಪೆರೋಲ್ ಕಾರ್ಯಕ್ರಮದ ಅಡಿಯಲ್ಲಿ ಅಮೆರಿಕಕ್ಕೆ ಬಂದ ಅರ್ಧ ಮಿಲಿಯನ್ ವಲಸಿಗರಲ್ಲಿ "ಬಹುಪಾಲು" ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಕ್ಯಾಲಿಫೋರ್ನಿಯಾದ ವಲಸೆ ವಕೀಲರಾದ ನಿಕೋಲೆಟ್ ಗ್ಲೇಜರ್ ಅವರು ಹೇಳಿದ್ದಾರೆ.
ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಇರುವ ದೇಶಗಳ ಜನರು ಅಮೆರಿಕಕ್ಕೆ ಪ್ರವೇಶಿಸಲು ಮತ್ತು ತಾತ್ಕಾಲಿಕವಾಗಿ ವಾಸಿಸಲು ಅಧ್ಯಕ್ಷರು ದೀರ್ಘಕಾಲದಿಂದ ಬಳಸುತ್ತಿರುವ ಕಾನೂನು ಸಾಧನವಾದ ಮಾನವೀಯ ಪೆರೋಲ್‌ನ “ವಿಶಾಲ ದುರುಪಯೋಗ”ವನ್ನು ಕೊನೆಗೊಳಿಸಲು ಟ್ರಂಪ್ ಆಡಳಿತವು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಲಾಗಿದೆ.
ಈ ಹೊಸ ಆದೇಶಕ್ಕೂ ಮುನ್ನ, ಮಾನವೀಯ ಪೆರೋಲ್‌ನಲ್ಲಿ ಬಂದವರು ತಮ್ಮ ಪೆರೋಲ್ ಅವಧಿ ಮುಗಿಯುವವರೆಗೆ ಅಮೆರಿಕದಲ್ಲಿಯೇ ಉಳಿಯಬಹುದಿತ್ತು. ಆದರೆ, ಟ್ರಂಪ್ ಆಡಳಿತ ಅವರಿಗೆ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುವ ಆಶ್ರಯ ವೀಸಾಗಳು ಮತ್ತು ಇತರ ವಿನಂತಿಗಳಿಗಾಗಿ ಅವರ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವುದನ್ನು ನಿಲ್ಲಿಸಿದೆ. ಸರ್ಕಾರದ ಈ ನಿರ್ಧಾರವನ್ನು ಈಗಾಗಲೇ ಫೆಡರಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದೆ.