ವಾಷಿಂಗ್ಟನ್ ಡಿಸಿ: ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಬುಧವಾರ ನಡೆದ ಯಹೂದಿ ಸಮುದಾಯದ ಸಂಗೀತ ಕಾರ್ಯಕ್ರಮದ ಹೊರಗೆ ಇಸ್ರೇಲಿ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
US ನಲ್ಲಿನ ಇಸ್ರೇಲ್ ರಾಯಭಾರಿ ಯೆಚಿಲ್ ಲೀಟರ್ ಪ್ರಕಾರ, ಮೃತ ಯುವಕ ಉಂಗುರ ಖರೀದಿಸಿದ್ದರು. ಮುಂದಿನ ವಾರ ಜೆರುಸಲೆಮ್‌ನಲ್ಲಿ ತನ್ನ ಗೆಳತಿಗೆ ಮದುವೆ ಪ್ರಪೋಸ್ ಮಾಡಲು ಯೋಜಿಸಿದ್ದರು ಎಂದು ಮಾಹಿತಿ ತಿಳಿಸಿದ್ದಾರೆ. ಈ ಜೋಡಿ ವಾಷಿಂಗ್ಟನ್‌ನ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತಾ ಕಾರ್ಯಕ್ರಮ ಆನಂದಿಸಲು ಬಂದಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದಾರೆ.
ಬುಧವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ವ್ಯಕ್ತಿಯೋರ್ವ ಸಂಗೀತ ಕಾರ್ಯಕ್ರಮದ ಹೊರಗಿರುವುದು ಕಂಡುಬಂದಿದೆ. ಅಲ್ಲಿ ಅಮೆರಿಕದ ಯಹೂದಿ ಸಮಿತಿಯು ಯುವ ಯಹೂದಿ ವೃತ್ತಿಪರರಿಗೆ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.
ಮೆಟ್ರೋಪಾಲಿಟನ್ ಪೋಲೀಸ್ ಮುಖ್ಯಸ್ಥ ಪಮೇಲಾ ಸ್ಮಿತ್ ಪ್ರಕಾರ, ವ್ಯಕ್ತಿಯೋರ್ವ ಗುಂಡು ಹಾರಿಸಿದ್ದು, ಯುವ ಜೋಡಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಮ್ಯೂಸಿಯಂಗೆ ಬಂದ ಹಂತಕನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಆಗ ಪ್ಯಾಲೆಸ್ಟೈನ್" ಮುಕ್ತ, ಮುಕ್ತ ಎಂದು ಘೋಷಣೆ ಕೂಗುತ್ತಿದ್ದ ಎಂದು ತಿಳಿಸಿದರು.
ಶೂಟರ್ ಅನ್ನು ಚಿಕಾಗೋದ ಇಲಿಯಾಸ್ ರೋಡ್ರಿಗಸ್ (30) ಎಂದು ಗುರುತಿಸಲಾಗಿದ್ದು, ಅಮೆರಿಕದ ರಾಜಧಾನಿಯಿಂದ ಒಂದು ಮೈಲಿಗಿಂತ ಕಡಿಮೆ ದೂರದಲ್ಲಿ ಸಂಭವಿಸಿದ ಈ ದಾಳಿಯನ್ನು ಅಮೇರಿಕ ಮತ್ತು ಇಸ್ರೇಲಿ ಅಧಿಕಾರಿಗಳು ವ್ಯಾಪಕವಾಗಿ ಖಂಡಿಸಿದ್ದಾರೆ.