ಟೊರೊಂಟೊ: ಕೆನಡಾದಲ್ಲಿ ವಲಸಿಗರ ವಿರುದ್ಧ ಜನಾಂಗೀಯ ದಾಳಿ ಹೆಚ್ಚಾಗುತ್ತಿದೆ. ಟೊರೊಂಟೊದ ಮೆಕ್‌ಡೊನಾಲ್ಡ್ಸ್ ಮಳಿಗೆಯೊಂದರಲ್ಲಿ ಭಾರತೀಯ ಮೂಲದವನು ಎಂದು ಹೇಳಲಾದ ಯುವಕನೊಬ್ಬನ ಮೇಲೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೆಕ್‌ಡೊನಾಲ್ಡ್ಸ್ ಮಳಿಗೆಯ 'ಮೊಬೈಲ್ ಆರ್ಡರ್ ಪಿಕ್ ಅಪ್' ಕೌಂಟರ್ ಬಳಿ ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಿದ್ದ ನಿಂತಿದ್ದ ಕಂದು ಬಣ್ಣದ ವ್ಯಕ್ತಿಯ ಬಳಿಗೆ ಬಂದ ಟೊರೊಂಟೊ ಬ್ಲೂ ಜೇಸ್ ಜಾಕೆಟ್ ಧರಿಸಿದ ಕೆನಡಾದ ಪ್ರಜೆ, ಕಾರಣವಿಲ್ಲದೆ ಕೆಣಕಿ, ಆತನ ಕುತ್ತಿಗೆಗೆ ಕೈ ಹಾಕಿ ಹಲ್ಲೆ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಭಾರತೀಯ ಯುವಕನ ಕಾಲರ್ ಹಿಡಿದ ಕೆನಡಾ ಪ್ರಜೆ, ಆತ ಶ್ರೇಷ್ಟನಂತೆ ಧಿಮಾಕು ತೋರಿಸುತ್ತಿದ್ದಾನೆ ಅಂತಾ ಹೇಳುವುದು ವಿಡಿಯೋದಲ್ಲಿದೆ.
ಭಾರತೀಯ ಯುವಕ ಯಾವುದೇ ಪ್ರತೀಕಾರವಿಲ್ಲದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮಧ್ಯ ಪ್ರವೇಶಿಸಿದ ಬಹುಶ: ಮಳಿಗೆಯ ಸಿಬ್ಬಂದಿ ಕೆನಡಾ ಪ್ರಜೆಯನ್ನು ಸಮಾಧಾನಪಡಿಸಿ ಹೊರಗೆ ಕಳುಹಿಸಿದ್ದಾನೆ.
ಇಲ್ಲಿಯವರೆಗೆ, ಪೊಲೀಸರು ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ ಮತ್ತು ಇಬ್ಬರು ಪುರುಷರ ಗುರುತು ದೃಢೀಕರಿಸಲಾಗಿಲ್ಲ. ಆದರೆ ನವೆಂಬರ್ 1 ರಂದು ಈ ಘಟನೆ ನಡೆದಿದೆ. ಕೆನಡಾದ ಎಡ್ಮಂಟನ್‌ನಲ್ಲಿ 55 ವರ್ಷದ ಕೆನಡಾ-ಭಾರತೀಯ ಉದ್ಯಮಿ ಅರ್ವಿ ಸಿಂಗ್ ಸಾಗೂ ಮೇಲೆ ಅಪರಿಚಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕೆಲವು ದಿನಗಳ ನಂತರ ಈ ಆತಂಕಕಾರಿ ಘಟನೆ ನಡೆದಿದೆ. ಐದು ದಿನಗಳ ನಂತರ ಅಕ್ಟೋಬರ್ 24 ರಂದು ಸಾಗೂ ಸಾವನ್ನಪ್ಪಿದರು.