ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ತಮ್ಮ ಚುನಾವಣಾ ವಿಜಯವನ್ನು ದೀರ್ಘಕಾಲದ ರಾಜಕೀಯ ರಾಜವಂಶವನ್ನು ಕೊನೆಗೊಳಿಸುವ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಉಲ್ಲೇಖಿಸಿ, ಮಮ್ದಾನಿ ತಮ್ಮ ಗೆಲುವು ನಗರದ "ಹಳೆಯದರಿಂದ ಹೊಸದಕ್ಕೆ" ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
ನ್ಯೂಯಾರ್ಕ್ ಸಿಟಿ ಮೇಯರ್ ಸ್ಪರ್ಧೆಯಲ್ಲಿ ರಾಜಕೀಯ ಪ್ರಬಲ ನಾಯಕ ಮಾಜಿ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸುವ ಮೂಲಕ ಮಮ್ದಾನಿ ಇತಿಹಾಸ ನಿರ್ಮಿಸಿದರು.
ಸ್ನೇಹಿತರೇ, ನಾವು ರಾಜಕೀಯ ರಾಜವಂಶವನ್ನು ಉರುಳಿಸಿದ್ದೇವೆ ಎಂದು ಮಮ್ದಾನಿ ನಿನ್ನೆ ಮಂಗಳವಾರ ರಾತ್ರಿ ತಮ್ಮ ವಿಜಯ ಭಾಷಣದಲ್ಲಿ ಹೇಳಿದರು. ನಾನು ಆಂಡ್ರ್ಯೂ ಕ್ಯುಮೊಗೆ ವೈಯಕ್ತಿಕ ಜೀವನದ ಶುಭ ಹಾರೈಸುತ್ತೇನೆ, ನ್ಯೂಯಾರ್ಕ್ ಇಂದು ರಾತ್ರಿ ಯಶಸ್ವಿಯಾಗಿದೆ.
ಅಸಾಧ್ಯವಾದದ್ದನ್ನು ಸಾಧ್ಯವಾಗಿಸಬಹುದು ಎಂದು ನ್ಯೂಯಾರ್ಕ್ ನಿವಾಸಿಗಳು ಧೈರ್ಯದಿಂದ ಆಶಿಸಿದ್ದರಿಂದ ಮತ್ತು ರಾಜಕೀಯವು ಇನ್ನು ಮುಂದೆ ನಮಗೆ ಮಾಡಬೇಕಾದ ಕೆಲಸವಲ್ಲ, ಬದಲಾಗಿ ನಾವು ಸಕ್ರಿಯವಾಗಿ ರೂಪಿಸುವಂತಹದ್ದು ಎಂದು ನಾವು ಒತ್ತಾಯಿಸಿದ್ದರಿಂದ ನಾವು ಗೆದ್ದಿದ್ದೇವೆ ಎಂದರು.
ಇಂದು ನಿಮ್ಮ ಮುಂದೆ ನಿಂತು, ಜವಾಹರಲಾಲ್ ನೆಹರು ಅವರ ಮಾತುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ, ಒಂದು ಕ್ಷಣ ಬರುತ್ತದೆ, ಆದರೆ ಇತಿಹಾಸದಲ್ಲಿ ಅಪರೂಪಕ್ಕೆ, ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕಿದಾಗ, ಒಂದು ಯುಗ ಕೊನೆಗೊಂಡು ದೀರ್ಘಕಾಲ ನಿಗ್ರಹಿಸಲ್ಪಟ್ಟ ರಾಷ್ಟ್ರದ ಆತ್ಮವು ಧ್ವನಿಯನ್ನು ಕಂಡುಕೊಳ್ಳುತ್ತದೆ. ಇಂದು ರಾತ್ರಿ, ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕಿದ್ದೇವೆ ಎಂದರು.
ಅಧ್ಯಕ್ಷ ಟ್ರಂಪ್ ಗೆ ಎಚ್ಚರಿಕೆ
ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಟ್ರಂಪ್ಗೆ ಎಚ್ಚರಿಕೆ ನೀಡಿದ್ದಾರೆ. ನೀವು ನನ್ನನ್ನು ನೋಡುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ ನಿಮಗಾಗಿ ನನ್ನ ನಾಲ್ಕು ಮಾತುಗಳಿವೆ ಗಮನವಿಟ್ಟು ಕೇಳಿ ‘ಟರ್ನ್ ದಿ ವಾಲ್ಯೂಮ್ ಅಪ್’ ಎಂದು ಹೇಳಿದ್ದಾರೆ. ಭವಿಷ್ಯ ನಮ್ಮ ಕೈಲಿದೆ ಎಂದರು. ಮಮ್ದಾನಿ ತಮ್ಮ ಭಾಷಣವನ್ನು ಬಾಲಿವುಡ್ ಚಿತ್ರ ಧೂಮ್ ನ ಶೀರ್ಷಿಕೆ ಗೀತೆ ಧೂಮ್ ಮಚಾಲೆಯೊಂದಿಗೆ ಮುಗಿಸಿದರು.
ತಮ್ಮ ಭಾಷಣವನ್ನು ಕೇಳಲು ಅವರು ಅಮೆರಿಕ ಅಧ್ಯಕ್ಷರನ್ನು ಕೇಳಿಕೊಂಡರು. ಜನಸಮೂಹ ಮಮ್ದಾನಿಗಾಗಿ ಹುರಿದುಂಬಿಸುತ್ತಿದ್ದಂತೆ, ಅವರು ಅಮೆರಿಕ ಅಧ್ಯಕ್ಷರನ್ನು ಸವಾಲು ಹಾಕಿದರು ಮತ್ತು ನ್ಯೂಯಾರ್ಕ್ ನಿವಾಸಿಗಳು ಅವರ ವಿರುದ್ಧ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದರು. ನಗರದ ಅತ್ಯಂತ ಕಿರಿಯ ಮೇಯರ್ ಆಗಲಿದ್ದಾರೆ. ಅವರು ಜನವರಿ 1, 2026 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮಂಗಳವಾರ ನಡೆದ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಪ್ರತಿಸ್ಪರ್ಧಿ ಜೋಹ್ರಾನ್ ಮಮ್ದಾನಿ ಐತಿಹಾಸಿಕ ಗೆಲುವು ಸಾಧಿಸಿದರು. ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿದರು. 34 ವರ್ಷದ ಮಮ್ದಾನಿ ನ್ಯೂಯಾರ್ಕ್ ನಗರದ ಅತ್ಯಂತ ಕಿರಿಯ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಲಿದ್ದಾರೆ. ಅವರ ಗೆಲುವಿನ ನಂತರ, ನ್ಯೂಯಾರ್ಕ್ ನಗರದ ಜೋಹ್ರಾನ್ ಮಮ್ದಾನಿ ಅವರ ಪ್ರಚಾರ ಕೇಂದ್ರ ಕಚೇರಿಯ ಹೊರಗೆ ನೂರಾರು ಬೆಂಬಲಿಗರು ಜಮಾಯಿಸಿ ಫ್ರೀ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದರು.