ಟೆಕ್ಸಾಸ್: ಆಂಧ್ರ ಪ್ರದೇಶ ಮೂಲದ 23 ವರ್ಷದ ವಿದ್ಯಾರ್ಥಿನಿಯೊಬ್ಬರು ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ 23 ವರ್ಷದ ಭಾರತೀಯ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಕುಟುಂಬ ಮತ್ತು ಸ್ನೇಹಿತರನ್ನು ತೀವ್ರ ಆಘಾತಕ್ಕೆ ದೂಡಿದೆ. ಆಂಧ್ರಪ್ರದೇಶದ ನಿವಾಸಿಯಾಗಿದ್ದ ರಾಜ್ಯಲಕ್ಷ್ಮಿ (ರಾಜಿ) ಯರ್ಲಗಡ್ಡ ಎಂಬ ವಿದ್ಯಾರ್ಥಿನಿ ಇತ್ತೀಚೆಗೆ ಟೆಕ್ಸಾಸ್ ಎ & ಎಂ ವಿಶ್ವವಿದ್ಯಾಲಯ-ಕಾರ್ಪಸ್ ಕ್ರಿಸ್ಟಿಯಿಂದ ಪದವಿ ಪಡೆದಿದ್ದು, ಅಮೆರಿಕದಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ರಾಜ್ಯಲಕ್ಷ್ಮಿ ಯರ್ಲಗಡ್ಡ ನವೆಂಬರ್ 7 ರಂದು ನಿಧನರಾಗಿದ್ದು, ಅವರ ಸೋದರಸಂಬಂಧಿ ಚೈತನ್ಯ ವೈವಿಕೆ ಪ್ರಕಾರ, ಕಳೆದ ಎರಡು ಮೂರು ದಿನಗಳಿಂದ ರಾಜ್ಯಲಕ್ಷ್ಮಿ ತೀವ್ರ ಕೆಮ್ಮು ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.
"ದುರಂತವೆಂದರೆ, ನವೆಂಬರ್ 7, 2025 ರ ಬೆಳಿಗ್ಗೆ, ಅಲಾರಾಂ ಬಾರಿಸಿದಾಗ ಅವರು ಎಚ್ಚರಗೊಳ್ಳಲಿಲ್ಲ, ಇದು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಭೀತಿ ಮೂಡಿಸಿತು" ಎಂದು ಸೋದರಸಂಬಂಧಿ ಹೇಳಿದರು. ನಂತರ ಅವರ ಸ್ನೇಹಿತರು ಅವರು ನಿದ್ರೆಯಲ್ಲಿಯೇ ನಿಧನರಾಗಿದ್ದಾರೆ ಎಂದು ಕಂಡುಕೊಂಡರು ಎಂದು ಹೇಳಿದರು.
ಪ್ರಸ್ತುತ ಮೃತ ರಾಜ್ಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪರೀಕ್ಷೆಯು ಅಮೆರಿಕದಲ್ಲಿ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿದೆ ಎನ್ನಲಾಗಿದೆ.
ಶವ ಸಾಗಣೆಗೆ 'ಹಣ ಸಂಗ್ರಹ ಅಭಿಯಾನ'
ರಾಜ್ಯಲಕ್ಷ್ಮಿ ಅವರ ಮೃತದೇಹವನ್ನು ಭಾರತಕ್ಕೆ ರವಾನಿಸಲು ಹಾಗೂ ಕುಟುಂಬಕ್ಕೆ ಆರ್ಥಿಕ ಸಹಾಯಕ್ಕಾಗಿ ಗೋ ಫಂಡ್ ಮಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾವಿನ ನಿಖರ ಕಾರಣ ತಿಳಿಯಲು ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಈಗಾಗಲೇ ಅಲ್ಲಿನ ಭಾರತೀಯ ಸಮುದಾಯಗಳಿಂದ ಸಹಾಯ ಹರಿದು ಬರುತ್ತಿದ್ದು, ಸದ್ಯದಲ್ಲೇ ಭಾರತೀಯ ರಾಯಭಾರಿ ಕಚೇರಿಯಿಂದ ಸಹಾಯ ಬರುವ ನೀರಿಕ್ಷೆಯಿದೆ.
ಚೈತನ್ಯ ಎಂಬುವವರು ಆಂಧ್ರಪ್ರದೇಶದಲ್ಲಿರುವ ರಾಜ್ಯಲಕ್ಷ್ಮಿ ಅವರ ದುಃಖಿತ ಕುಟುಂಬಕ್ಕೆ ಸಹಾಯ ಮಾಡಲು ಟೆಕ್ಸಾಸ್‌ನ ಡೆಂಟನ್‌ನಿಂದ ಗೋಫಂಡ್ ಮಿ ಮೂಲಕ ನಿಧಿಸಂಗ್ರಹಣೆಯನ್ನು ಪ್ರಾರಂಭಿಸಿದ್ದಾರೆ. ನಿಧಿಸಂಗ್ರಹಣೆ ಮನವಿಯಲ್ಲಿ, ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಕರ್ಮೆಚೆಡು ಗ್ರಾಮದಲ್ಲಿರುವ ತನ್ನ ರೈತ ಪೋಷಕರಿಗೆ ಸಹಾಯ ಮಾಡುವ ಕನಸಿನೊಂದಿಗೆ ರಾಜ್ಯಲಕ್ಷ್ಮಿ ಅಮೆರಿಕಕ್ಕೆ ಬಂದಿದ್ದಾರೆ ಎಂದು ಸೋದರ ಸಂಬಂಧಿ ಹೇಳಿದ್ದಾರೆ.
ಅಂತ್ಯಕ್ರಿಯೆಯ ವೆಚ್ಚಗಳಿಗೆ ಈ ಹಣವನ್ನು ಸಂಗ್ರಹಿಸುವುದು, ರಾಜ್ಯಲಕ್ಷ್ಮಿ ಅವರ ದೇಹವನ್ನು ಭಾರತಕ್ಕೆ ಸಾಗಿಸುವುದು, ಅವರ ಶೈಕ್ಷಣಿಕ ಸಾಲಗಳನ್ನು ಮರುಪಾವತಿಸುವುದು ಮತ್ತು ಅವರ ಪೋಷಕರಿಗೆ ಸ್ವಲ್ಪ ಆರ್ಥಿಕ ನೆರವು ನೀಡುವುದು ಈ ಅಭಿಯಾನದ ಗುರಿಯಾಗಿದೆ.
'2 ದಿನಗಳಿಂದ ತೀವ್ರ ಕೆಮ್ಮು, ಎದೆ ನೋವು'
ಮೃತ ವಿದ್ಯಾರ್ಥಿನಿಯ ಸಂಬಂಧಿ ಚೈತನ್ಯ ಮಾಹಿತಿ ನೀಡಿದ್ದು, ರಾಜಿ ಸಾವನ್ನಪ್ಪುವ ಕೆಲ ದಿನಗಳ(2-3) ಹಿಂದಿನಿಂದಲೂ ತೀವ್ರ ಕೆಮ್ಮು ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು.ಇನ್ನು, ನ.7ರಂದು ಬೆಳ್ಳಗೆ ಅಲಾರಂ ಸದ್ದಿಗೆ ಆಕೆ ಪ್ರತಿಕ್ರಿಯಿಸದೆ ಹಾಗೇ ಚಲನೆಯಿಲ್ಲದೆ ಇದ್ದಾಗ ಆಕೆಯ ಸ್ನೇಹಿತರು ಬಂದು ಪರಿಶೀಲನೆ ನಡೆಸಿದ್ದು ನಿದ್ರೆಯಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ.
ರಾಜಿ ತಮ್ಮ ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ನೀಡುವ ಕನಸಿನೊಂದಿಗೆ ಅಮೆರಿಕಗೆ ಬಂದಿದ್ದರು. ಅವರ ಕುಟುಂಬವು ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ಕರ್ಮೆಚೆಡು ಗ್ರಾಮದಲ್ಲಿ ಕೃಷಿಯನ್ನು ಅವಲಂಬಿಸಿದೆ. ಆಕೆ ಆ ಕುಟುಂಬದ ಅತ್ಯಂತ ಕಿರಿಯ ಸದಸ್ಯರಾಗಿದ್ದರು.
ಅವರು ತಮ್ಮ ಹೆತ್ತವರ ಕೃಷಿ ಕಾರ್ಯವನ್ನು ಮುಂದುವರಿಸಲು ಸಹಾಯ ಮಾಡುವ ಕನಸು ಕಂಡಿದ್ದರು. ಆದರೆ ಈಗ ಆಕೆಯ ಅಕಾಲಿಕ ಹಾಗೂ ಅನಿರಿಕ್ಷಿತ ಮರಣದಿಂದಾಗಿ ತಮ್ಮ ಕುಟುಂಬದ ಆರ್ಥಿಕ ಸಂಕಷ್ಟ ಹೆಚ್ಚಾಗುವಂತೆ ಆಗಿದೆ ಎಂದು ಬರೆದಿದ್ದಾರೆ.