ಕಠ್ಮಂಡು: ನೆರೆಯ ನೇಪಾಳದಲ್ಲಿ ಯುವಜನರ ಕೋಪ ಅಂದರೆ ಜನರಲ್ ಝಡ್ ಗುಂಪು ಘರ್ಷಣೆ ಮತ್ತೊಮ್ಮೆ ಭುಗಿಲೆದ್ದಿದ್ದು, ಬಾರಾ ಜಿಲ್ಲೆಯ ಕೆಲವು ಭಾಗಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಜನರಲ್ ಝಡ್ ಚಳುವಳಿ ಮತ್ತು ಮಾಜಿ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ–ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಎನ್-ಯುಎಂಎಲ್) ನಡುವೆ ಘರ್ಷಣೆ ನಡೆದ ನಂತರ ಬುಧವಾರ ಜಾರಿಯಾಗಿದ್ದ ಕರ್ಫ್ಯೂ ಅನ್ನು ಗುರುವಾರ ರಾತ್ರಿ 8 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಘರ್ಷಣೆಯನ್ನು ತಡೆಗಟ್ಟಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ವಿಮಾನ ನಿಲ್ದಾಣದ ಬಳಿಯ ಪಟ್ಟಣವಾದ ಸಿಮಾರಾ ಬುಧವಾರ ಭಾರೀ ರಾಜಕೀಯ ಘರ್ಷಣೆಗೆ ಸಾಕ್ಷಿಯಾಯಿತು. ಸಿಪಿಎನ್-ಯುಎಂಎಲ್ ಪಕ್ಷದ ಯುವ ಜಾಗೃತಿ ಅಭಿಯಾನಕ್ಕೆ ಆಗಮಿಸುತ್ತಿದ್ದ ನಾಯಕರ ವಿರುದ್ಧ “ಜನರಲ್ ಝಡ್” ಎಂಬ ಹೊಸ ಪೀಳಿಗೆಯ ಗುಂಪು ತೀವ್ರ ಪ್ರತಿಭಟನೆ ನಡೆಸಿತು. ಈ ವೇಳೆ ಎರಡೂ ಗುಂಪುಗಳ ನಡುವೆ ಉದ್ವಿಗ್ನತೆ ಭುಗಿಲೆದ್ದಿತು. ಈ ವೇಳೆ ಕಲ್ಲು ತೂರಾಟ, ಲಾಠಿ ದಾಳಿಯಿಂದ ಪ್ರಾರಂಭವಾದ ಘರ್ಷಣೆಯಲ್ಲಿ ಹಲವು ಯುವಕರು ಗಾಯಗೊಂಡಿದ್ದಾರೆ. ಜನರಲ್ ಝಡ್ ಯುವಕರು ಯುಎಂಎಲ್ ಕಾರ್ಯಕರ್ತರು ತಮ್ಮ ಮೇಲೆ ಮೊದಲು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರೆ, ಯುಎಂಎಲ್ ಇದನ್ನು “ಯೋಜಿತ ಗೂಂಡಾಗಿರಿ” ಎಂದು ಕಿಡಿ ಕಾರಿದೆ.
ನಂತರ ಭದ್ರತಾ ಪಡೆಗಳು ಜನಸಮೂಹವನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿತು ಮತ್ತು ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಕರ್ಫ್ಯೂ ಜಾರಿಗೊಳಿಸಿತು. ಸದ್ಯ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
"ಪರಿಸ್ಥಿತಿ ಸಾಮಾನ್ಯವಾಗಿದೆ. ಯಾರಿಗೂ ತೀವ್ರ ಗಾಯಗಳಾಗಿಲ್ಲ" ಎಂದು ನೇಪಾಳ ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಫ್ಲೆ ಎಎಫ್‌ಪಿಗೆ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಕೆಪಿ ಶರ್ಮಾ ಒಲಿ ಸರ್ಕಾರವನ್ನು ಉರುಳಿಸಿದ ಯುವಕರ ನೇತೃತ್ವದ ದಂಗೆಯು ಕೇವಲ ಎರಡು ತಿಂಗಳ ನಂತರ ಮತ್ತೆ ಘರ್ಷಣೆಗೆ ಕಾರಣವಾಗಿದೆ. "ಜನರಲ್ ಝಡ್ ದಂಗೆ" ಎಂದು ಹೆಸರಿಸಲ್ಪಟ್ಟ ಈ ಚಳುವಳಿ, ಸಾಮಾಜಿಕ ಮಾಧ್ಯಮದ ಮೇಲಿನ ಸಂಕ್ಷಿಪ್ತ ನಿಷೇಧದ ನಂತರ ಭುಗಿಲೆದ್ದಿತು ಮತ್ತು ಸೆಪ್ಟೆಂಬರ್ 8 ಹಾಗೂ 9 ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 76 ಜನ ಸಾವನ್ನಪ್ಪಿದರು. ಈ ಸಂದರ್ಭದಲ್ಲಿ ಸರ್ಕಾರಿ ಕಟ್ಟಡಗಳು, ನ್ಯಾಯಾಲಯಗಳು ಮತ್ತು ಸಂಸತ್ತಿನ ಮೇಲೆ ದಾಳಿ ಮಾಡಲಾಯಿತು. ಬಳಿಕ 73 ವರ್ಷದ ಓಲಿ ಅವರನ್ನು ಪದಚ್ಯುತಗೊಳಿಸಲಾಯಿತು.
ಓಲಿ ಪದಚ್ಯುತಗೊಳಿಸಿದ ನಂತರ ನೇಮಕಗೊಂಡ ಮಾಜಿ ಮುಖ್ಯ ನ್ಯಾಯಾಧೀಶೆ, ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಅವರು ಬುಧವಾರ ರಾತ್ರಿ, ಯುವಕರು ಸಂಯಮ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ "ಅನಗತ್ಯ ಪ್ರಚೋದನೆ" ಯ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
"ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಅತ್ಯಂತ ಸಂಯಮ ಮತ್ತು ಸಿದ್ಧತೆಯೊಂದಿಗೆ ಕೆಲಸ ಮಾಡಲು ನಾನು ಗೃಹ ಆಡಳಿತ ಮತ್ತು ಭದ್ರತಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದೇನೆ" ಎಂದು ಕರ್ಕಿ ಹೇಳಿದ್ದಾರೆ. ಅಲ್ಲದೆ ರಾಜಕೀಯ ನಾಯಕರ ಸುರಕ್ಷಿತ ಚಲನೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು "ನ್ಯಾಯಯುತ ಹಾಗೂ ಭಯ-ಮುಕ್ತ" ಚುನಾವಣಾ ವಾತಾವರಣವನ್ನು ಸೃಷ್ಟಿಸುವುದು ಅವರ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.