ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.7ರಷ್ಟು ದಾಖಲಾಗಿದೆ.
ಶುಕ್ರವಾರ ಬೆಳಗ್ಗೆ ಬಾಂಗ್ಲಾದೇಶದಲ್ಲಿ 5.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶ ಮಾತ್ರವಲ್ಲದೇ ಭಾರತದ ಕೋಲ್ಕತಾ ಸೇರಿದಂತೆ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ. ಬಾಂಗ್ಲಾದೇಶದ ನರಸಿಂಗ್ಡಿ ಬಳಿ ಇದರ ಕೇಂದ್ರ ಬಿಂದು ಪತ್ತೆಯಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10:08ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು ಢಾಕಾದಿಂದ ಆಗ್ನೇಯಕ್ಕೆ 10 ಕಿ.ಮೀ ದೂರದಲ್ಲಿ ಮತ್ತು ಭೂಮಿಯ 10 ಕಿ.ಮೀ ಆಳದಲ್ಲಿ ದಾಖಲಾಗಿದೆ.
ಕನಿಷ್ಠ 6 ಮಂದಿ ಸಾವು
ಇನ್ನು ಈ ಪ್ರಬಲ ಭೂಕಂಪನದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಮೂವರು ಸಾವನ್ನಪ್ಪಿದ್ದು, ಇನ್ನೂ ಮೂವರು ಕಟ್ಟಡದ ರೇಲಿಂಗ್ ಬಿದ್ದು ಮೃತಪಟ್ಟಿದ್ದಾರೆ ಎಂದು ಡಿಬಿಸಿ ಟೆಲಿವಿಷನ್ ವರದಿ ಮಾಡಿದೆ.
ಭಾರತದಲ್ಲೂ ಕಂಪಿಸಿದ ಭೂಮಿ
ಇನ್ನು ಬಾಂಗ್ಲಾದೇಶ ಮಾತ್ರವಲ್ಲದೇ ಭಾರತದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದೆ. ಈಶಾನ್ಯ ಭಾರತದ ರಾಜ್ಯಗಳಾದ ಮೇಘಾಲಯದ ಶಿಲ್ಲಾಂಗ್, ತ್ರಿಪುರಾ ಮತ್ತು ಮಿಜೋರಾಂನ ಐಜ್ವಾಲ್‌ನಲ್ಲೂ ಭೂಕಂಪದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ. ಕಂಪನದ ತೀವ್ರತೆಗೆ ಮನೆಯಲ್ಲಿನ ಫ್ಯಾನುಗಳು ಮತ್ತು ಗೋಡೆಗೆ ಹಾಕಿದ್ದ ವಸ್ತುಗಳು ಅಲುಗಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ಕೂಚ್ ಬೆಹಾರ್, ದಕ್ಷಿಣ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕೋಲ್ಕತ್ತಾದಲ್ಲಿ ಕಟ್ಟಡಗಳು ನಡುಗಿದ ಅನುಭವವಾಗಿದ್ದು, ಜನ ಭಯಭೀತರಾಗಿ ರಸ್ತೆಗೆ ಓಡಿ ಬಂದಿದ್ದಾರೆ. ಕಂಪನದ ತೀವ್ರತೆಗೆ ಮನೆಯಲ್ಲಿನ ಫ್ಯಾನುಗಳು ಮತ್ತು ಗೋಡೆಗೆ ಹಾಕಿದ್ದ ವಸ್ತುಗಳು ಅಲುಗಾಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುಮಾರು 30 ಸೆಕೆಂಡುಗಳ ಕಾಲ ಕಟ್ಟಡ ಜೋರಾಗಿ ಅಲುಗಾಡಿದ ಅನುಭವವಾಯಿತು, ಇದು ನನ್ನ ಜೀವನದಲ್ಲೇ ಅತ್ಯಂತ ಭಯಾನಕ ಅನುಭವ," ಎಂದು ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಪಾಕಿಸ್ತಾನದಲ್ಲೂ ಕಂಪಿಸಿದ ಭೂಮಿ
ಇನ್ನೊಂದೆಡೆ, ಗುರುವಾರ ಮತ್ತು ಶುಕ್ರವಾರದಂದು ಪಾಕಿಸ್ತಾನದಲ್ಲೂ ಭೂಕಂಪ ಸಂಭವಿಸಿದೆ. ಗುರುವಾರ 3.9 ತೀವ್ರತೆಯ ಭೂಕಂಪ ನೆರೆಯ ರಾಷ್ಟ್ರದಲ್ಲಿ ಸಂಭವಿಸಿದ್ದರೆ, ಶುಕ್ರವಾರ 5.2 ತೀವ್ರತೆಯ ಕಂಪನ ದಾಖಲಾಗಿದೆ ಎಂದು ಎನ್‌ಸಿಎಸ್ ತಿಳಿಸಿದೆ.
ಅಂದಹಾಗೆ ಭಾರತ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಸಂಗಮದ ವಲಯದಲ್ಲಿ ಈ ಪ್ರದೇಶಗಳು ಬರುವುದರಿಂದ ಇಲ್ಲಿ ಭೂಕಂಪಗಳು ಸಂಭವಿಸುವುದು ಸರ್ವೇ ಸಾಮಾನ್ಯವಾಗಿದೆ.