ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶುಕ್ರವಾರ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಾಹೋರ್‌ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಫೈಸಲಾಬಾದ್ ಜಿಲ್ಲೆಯಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ.
ಫೈಸಲಾಬಾದ್ ಜಿಲ್ಲಾಧಿಕಾರಿ ರಾಜಾ ಜಹಾಂಗೀರ್ ಅನ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಮಲಿಕ್‌ಪುರ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್‌ನ ಪ್ರಬಲ ಸ್ಫೋಟದಿಂದಾಗಿ ಹತ್ತಿರದ ಕಟ್ಟಡಗಳೂ ಕುಸಿದಿವೆ.
'ಇಲ್ಲಿಯವರೆಗೆ, ರಕ್ಷಣಾ ತಂಡಗಳು ಅವಶೇಷಗಳಿಂದ 15 ಮೃತ ದೇಹಗಳನ್ನು ಹೊರತೆಗೆದಿವೆ ಮತ್ತು ಏಳು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ಹೆಚ್ಚಿನ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ತಂಡಗಳು ಅವಶೇಷಗಳನ್ನು ತೆಗೆಯುವಲ್ಲಿ ನಿರತವಾಗಿವೆ' ಎಂದು ಅನ್ವರ್ ಹೇಳಿದರು.
ಪಂಜಾಬ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಉಸ್ಮಾನ್ ಅನ್ವರ್ ಹೇಳಿಕೆಯಲ್ಲಿ, ರೆಸ್ಕ್ಯೂ 1122, ಅಗ್ನಿಶಾಮಕ ದಳ ಮತ್ತು ಸಂಬಂಧಿತ ಎಲ್ಲ ಸಂಸ್ಥೆಗಳಿಗೆ ಸಂಪೂರ್ಣ ಬೆಂಬಲ ಒದಗಿಸಬೇಕೆಂದು ನಿರ್ದೇಶಿಸಿದ್ದಾರೆ.
ರಾಸಾಯನಿಕ ಕಾರ್ಖಾನೆಯಲ್ಲಿನ ಬಾಯ್ಲರ್ ಸ್ಫೋಟದಲ್ಲಿ ಅಮೂಲ್ಯ ಜೀವಗಳು ನಷ್ಟವಾದ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಘಟನೆಯ ಬಗ್ಗೆ ಫೈಸಲಾಬಾದ್ ಆಯುಕ್ತರಿಂದ ವಿವರವಾದ ವರದಿಯನ್ನು ಕೋರಿದರು.