ಗಾಜಾ: ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಮತ್ತೊಮ್ಮೆ ಉಲ್ಲಂಘನೆಯಾಗಿದೆ. ಉತ್ತರ ಮತ್ತು ಮಧ್ಯ ಗಾಜಾದಾದ್ಯಂತ ಇಸ್ರೇಲ್ ನಡೆಸಿದ ಡ್ರೋನ್, ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 24 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಡಜನ್ ಗಟ್ಟಲೇ ಜನರು ಗಾಯಗೊಂಡಿದ್ದಾರೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ 24 ಜನರು ಸಾವನ್ನಪ್ಪಿದ್ದು, ಮಕ್ಕಳು ಸೇರಿದಂತೆ 54 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ.
ಎರಡು ವರ್ಷಗಳ ಯುದ್ಧದ ನಂತರ, ಅಕ್ಟೋಬರ್ 10 ರಂದು ಯುಎಸ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಜಾರಿಗೆ ಬಂದ ನಂತರ ಶನಿವಾರ ಭೀಕರ ದಾಳಿ ನಡೆದಿದೆ. ಸಶಸ್ತ್ರ ಭಯೋತ್ಪಾದಕ" ಗಾಜಾ ಪಟ್ಟಿಯೊಳಗಿನ ಹಳದಿ ರೇಖೆಯನ್ನು ದಾಟಿದ್ದಾನೆ. ಈ ವೇಳೆ ಇಸ್ರೇಲ್ ಸೈನಿಕರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ದಕ್ಷಿಣ ಗಾಜಾದಲ್ಲಿ ನಡೆದ ಘಟನೆಗೆ ಪ್ರತಿಕ್ರಿಯೆಯಾಗಿ, ಗಾಜಾ ಪಟ್ಟಿಯಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಹಮಾಸ್ ನಡೆಸುತ್ತಿರುವ ಗಾಜಾದಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ, ಗುರುವಾರದ ವೇಳೆಗೆ, ಕದನ ವಿರಾಮ ಆರಂಭವಾದಾಗಿನಿಂದ ಇಸ್ರೇಲ್ ಗುಂಡಿನ ದಾಳಿಯಲ್ಲಿ 312 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಹಮಾಸ್ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದೆ, ಐಡಿಎಫ್ ಸೈನಿಕರ ಮೇಲೆ ದಾಳಿ ಮಾಡಲು ಇಸ್ರೇಲ್ ವಶದಲ್ಲಿರುವ ಪ್ರದೇಶಕ್ಕೆ ಭಯೋತ್ಪಾದಕನನ್ನು ಕಳುಹಿಸಿದೆ.ಇದಕ್ಕೆ ಪ್ರತಿಕ್ರಿಯೆಯಾಗಿ ಹಮಾಸ್ ನ ಐವರು ಹಿರಿಯ ಬಂಡುಕೋರರನ್ನು ಇಸ್ರೇಲ್ ಹತ್ಯೆ ಮಾಡಿರುವುದಾಗಿ ಅದು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದೆ.
ಇಸ್ರೇಲ್ ಉಲ್ಲಂಘನೆ ಹೆಚ್ಚಳ "ಕದನ ವಿರಾಮವನ್ನು ದುರ್ಬಲಗೊಳಿಸುವ ಪ್ರಯತ್ನಗಳು" ಎಂದು ಹಮಾಸ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಮಧ್ಯವರ್ತಿಗಳು ತುರ್ತಾಗಿ ಮಧ್ಯಪ್ರವೇಶಿಸಿ ಈ ಉಲ್ಲಂಘನೆಗಳನ್ನು ತಕ್ಷಣವೇ ನಿಲ್ಲಿಸಲು ಒತ್ತಡ ಹಾಕುವಂತೆ ಒತ್ತಾಯಿಸಿದೆ. ಪ್ಯಾಲೆಸ್ಟೀನಿಯನ್ ವಿದೇಶಾಂಗ ಸಚಿವಾಲಯ ಈ ದಾಳಿಗಳನ್ನು ಖಂಡಿಸಿದೆ. ಹತ್ಯಾಕಾಂಡಗಳನ್ನು ನಿಲ್ಲಿಸಲು ಇಸ್ರೇಲ್ ಮೇಲೆ ತಕ್ಷಣ ಒತ್ತಡ ಹೇರುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.