ಸ್ಟಾಕ್‌ಹೋಮ್: 2025ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಗುರುವಾರ ಘೋಷಿಸಲಾಗಿದ್ದು, ಹಂಗೇರಿಯನ್ ಲೇಖಕ ಲಾಸ್ಲೊ ಕ್ರಾಸ್ನಹೊರ್ಕೈ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಭಾರೀ ನಿರೀಕ್ಷೆ ಮೂಡಿಸಿದ್ದ ಬಂಗಾಳಿ ಲೇಖಕ ಅಮಿತಾವ್ ಘೋಷ್ ಅವರಿಗೆ ಪ್ರಶಸ್ತಿ ಕೈತಪ್ಪಿದೆ.
ಲಾಸ್ಲೊ ಕ್ರಾಸ್ನಹೊರ್ಕೈ ಅವರ “Herscht 07769” ಕಾದಂಬರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ‘ಸ್ವೀಡಿಷ್ ಅಕಾಡೆಮಿ’ ತಿಳಿಸಿದೆ.
ವಿನಾಶಕಾರಿ ಭೀತಿಯ ಮಧ್ಯೆ, ಕಲೆಯ ಶಕ್ತಿಯನ್ನು ಪುನರುಚ್ಚರಿಸುವ ಅವರ ಅಪಾರ ಮತ್ತು ದೂರದೃಷ್ಟಿಯ ಕೃತಿಗಳಿಗಾಗಿ" ಕ್ರಾಸ್ನಹೊರ್ಕೈ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ಘೋಷಿಸಿದೆ.
2024ರ ಸಾಹಿತ್ಯ ಗೌರವವು ದಕ್ಷಿಣ ಕೊರಿಯಾದ ಕಾದಂಬರಿಗಾರ್ತಿ ಹಾನ್ ಕಾಂಗ್ ಅವರಿಗೆ ಸಂದಿತ್ತು. ನೊಬೆಲ್ ಪ್ರಶಸ್ತಿಯ ಪ್ರಾರಂಭದಿಂದಲೂ, ಸ್ವೀಡಿಷ್ ಅಕಾಡೆಮಿಯ ನೊಬೆಲ್ ಸಮಿತಿಯು 117 ಬಾರಿ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಒಟ್ಟು 121 ಪುರಸ್ಕೃತರಿಗೆ ಈ ಗೌರವ ಸಂದಿದೆ.