ವಾಷಿಂಗ್ಟನ್: ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೈತಪ್ಪಿದ್ದಕ್ಕೆ ಶ್ವೇತಭವನ ಶುಕ್ರವಾರ ನಾರ್ವೇಜಿಯನ್ ನೊಬೆಲ್ ಸಮಿತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
"ನೊಬೆಲ್ ಸಮಿತಿಯು ಶಾಂತಿಗಿಂತ ರಾಜಕೀಯವನ್ನು ಹೆಚ್ಚಾಗಿ ಇಷ್ಟಪಡುತ್ತದೆ ಎಂಬುದನ್ನು ಇದು ಸಾಬೀತುಪಡಿಸಿದೆ" ಎಂದು ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಅಧ್ಯಕ್ಷ ಟ್ರಂಪ್ ಶಾಂತಿ ಒಪ್ಪಂದ ಮಾಡಿಕೊಳ್ಳುವುದನ್ನು, ಯುದ್ಧಗಳನ್ನು ಕೊನೆಗೊಳಿಸುವುದನ್ನು ಮತ್ತು ಜೀವಗಳನ್ನು ಉಳಿಸುವುದನ್ನು ಮುಂದುವರಿಸುತ್ತಾರೆ. ಅವರು ಮಾನವೀಯ ಹೃದಯ ಹೊಂದಿದ್ದಾರೆ ಮತ್ತು ಅವರು ಇಚ್ಛಾಶಕ್ತಿಯ ಸಂಪೂರ್ಣ ಬಲವಿರುವ ವ್ಯಕ್ತಿ. ಅವರಂತೆ ಯಾರೂ ಇರುವುದಿಲ್ಲ" ಎಂದು ಹಾಡಿ ಹೊಗಳಿದೆ.
ಟ್ರಂಪ್ ಅವರು ಕಳೆದ ಜನವರಿಯಲ್ಲಿ ತಮ್ಮ ಎರಡನೇ ಅವಧಿಗೆ ಶ್ವೇತಭವನಕ್ಕೆ ಮರಳಿದಾಗಿನಿಂದ, ತಾವು ಹಲವಾರು ಸಂಘರ್ಷಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ತಾವು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಪದೇ ಪದೇ ಹೇಳುತ್ತಿದ್ದರು.
ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯ ಮುನ್ನಾದಿನದಂದು ಟ್ರಂಪ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಈ ವಾರ ಗಾಜಾದಲ್ಲಿ ಮೊದಲ ಹಂತದ ಕದನ ವಿರಾಮಕ್ಕೆ ಅವರು ಮಧ್ಯಸ್ಥಿಕೆ ವಹಿಸಿದ್ದು, ತಾವು ಕೊನೆಗೊಳಿಸಿದ ಎಂಟನೇ ಯುದ್ಧ ಎಂದು ಹೇಳಿದ್ದರು.
ಆದರೆ ಇಂದು ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದ್ದು, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಪ್ರತಿಷ್ಠಿ ಪ್ರಶಸ್ತಿ ನೀಡಲಾಗಿದೆ.