ಜೆರುಸಲೆಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವೇಳೆಯೇ ಇಸ್ರೇಲ್ ಸಂಸತ್ ನಲ್ಲಿ ದೊಡ್ಡ ಹೈಡ್ರಾಮಾ ನಡೆದಿದ್ದು, ಟ್ರಂಪ್ ಭಾಷಣದ ವೇಳೆ ಕೆಲ ಸಂಸದರು ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿ ಅಚ್ಚರಿ ಮೂಡಿಸಿದ್ದಾರೆ.
ಹೌದು.. ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಕದನ ವಿರಾಮ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಒಪ್ಪಂದವನ್ನು ಆಚರಿಸಲು ಇಸ್ರೇಲ್ ಗೆ ಆಗಮಿಸಿದ್ದು, ಈ ವೇಳೆ ಇಸ್ರೇಲ್ ನ ಎಲ್ಲ ಜನಪ್ರತಿನಿಧಿಗಳು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಅಭೂತಪೂರ್ವ ಸ್ವಾಗತ ಕೋರಿದರು.
ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್ ಅವರನ್ನು ಸ್ವಾಗತಿಸಿದರು. ಇಸ್ರೇಲ್ ಸೇನಾಪಡೆಗಳು ಮಿಲಿಟರಿ ಬ್ಯಾಂಡ್ ನುಡಿಸಿ ಸ್ವಾಗತ ಕೋರಿತು.
ಬಳಿಕ ಇಸ್ರೇಲ್ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಟ್ರಂಪ್ ಭಾಷಣ ಆರಂಭಿಸಿದರು. ಇಸ್ರೇಲ್ ಮತ್ತು ಗಾಜಾದ ಹಮಾಸ್ ಬಂಡುಕೋರರ ನಡುವಿನ ಸುದೀರ್ಘ 2 ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಟ್ರಂಪ್ ಭಾಷಣ ಮಾಡುತ್ತಿದ್ದರು.
ಈ ವೇಳೆ ಗಾಜಾ ಕದನ ವಿರಾಮದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಟ್ರಂಪ್ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಿಗೆ ಟ್ರಂಪ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೆ "ಒತ್ತೆಯಾಳುಗಳು ಹಿಂತಿರುಗಿದ್ದಾರೆ, ಅದನ್ನು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ" ಎಂದರು.
ಭಾಷಣ ವೇಳೆ Palestine ಪರ ಘೋಷಣೆ
ಡೊನಾಲ್ಡ್ ಟ್ರಂಪ್ ಭಾಷಣಕ್ಕೆ ಅಡ್ಡಿ ಪಡಿಸಿದ್ದಕ್ಕೆ ಇಸ್ರೇಲ್ ಸಂಸದರನ್ನು ಸಂಸತ್ ಭವನದಿಂದಲೇ ಬಲವಂತವಾಗಿ ಹೊರಹಾಕಿದ ಪ್ರಸಂಗ ಇಂದು ನಡೆಯಿತು. ಡೊನಾಲ್ಡ್ ಟ್ರಂಪ್ ಭಾಷಣ ಮಾಡುತ್ತಿದ್ದಾಗ ಅವರ ವಿರುದ್ಧ ಇಬ್ಬರು ಇಸ್ರೇಲ್ ಜನಪ್ರತಿನಿಧಿಗಳು ಪ್ಯಾಲೆಸ್ಟೈನ್ ಪರ ಘೋಷಣೆಗಳನ್ನು ಕೂಗಿದರು.
ಸಂಸದರಾದ ಐಮನ್ ಒಡೆಹ್ ಮತ್ತು ಓಫರ್ ಕ್ಯಾಸಿಫ್ ಹೀಬ್ರೂ ಭಾಷೆಯಲ್ಲಿ ಘೋಷಣೆ ಕೂಗಿದರು. ಇವರಿಬ್ಬರು ಪ್ಯಾಲೆಸ್ಟೈನ್ ರಾಷ್ಟ್ರದ ಮಾನ್ಯತೆಗಾಗಿ ಕರೆ ನೀಡುವ ಫಲಕಗಳನ್ನು ಹಿಡಿದಿದ್ದರು. ಘೊಷಣೆ ಕೂಗಿದ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಬಲವಂತವಾಗಿ ಎಡಪಂಥಿಯ ಸಂಸದರನ್ನು ಹೊರಗೆ ಎಳೆದುಕೊಂಡು ಹೋದರು.
ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ: ಟ್ರಂಪ್
ಬಳಿಕ ತಮ್ಮ ಭಾಷಣ ಮುಂದುವರೆಸಿದ ಡೊನಾಲ್ಡ್ ಟ್ರಂಪ್, 'ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ ಎಂದು ಹೇಳಿದರು.
'ಈ ಒಪ್ಪಂದವು ಯುದ್ಧವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿದೆ. ಇದು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯನ್ನು ನಿರ್ಮಿಸಲು ಬಾಗಿಲು ತೆರೆದಿದೆ. ಇದು ಯುದ್ಧದ ಅಂತ್ಯ ಮಾತ್ರವಲ್ಲ, ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯವಾಗಿದೆ. ನಾನು 8 ತಿಂಗಳಲ್ಲಿ 8 ಯುದ್ಧಗಳನ್ನು ಕೊನೆಗೊಳಿಸಿದ್ದೇನೆ” ಎಂದು ಪುನರುಚ್ಛರಿಸಿದ್ದಾರೆ.
ಗಾಜಾ ಯುದ್ಧದಲ್ಲಿ ಸಹಾಯ ಮಾಡಿದ ಕದನ ವಿರಾಮವು “ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ”ವನ್ನು ಗುರುತಿಸಿದೆ. ಹಲವು ವರ್ಷಗಳ ನಿರಂತರ ಯುದ್ಧ ಮತ್ತು ಅಂತ್ಯವಿಲ್ಲದ ಅಪಾಯದ ನಂತರ, ಇಂದು ಆಕಾಶವು ಶಾಂತವಾಗಿದೆ, ಬಂದೂಕುಗಳು ಮೌನವಾಗಿವೆ, ಸೈರನ್‌ಗಳು ನಿಶ್ಚಲವಾಗಿವೆ. ಕೊನೆಗೂ ಶಾಂತಿಯಿಂದ ಇರುವ ಪವಿತ್ರ ಭೂಮಿಯಲ್ಲಿ ಸೂರ್ಯ ಉದಯಿಸುತ್ತಿದ್ದಾನೆ ಎಂದರು.
ಅಂತೆಯೇ 'ಹಮಾಸ್ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಮತ್ತು ಅವರನ್ನು ಮನೆಗೆ ಕಳುಹಿಸಲು ಒತ್ತಾಯಿಸಲು ಒಗ್ಗೂಡಿದ ಅರಬ್ ಮತ್ತು ಮುಸ್ಲಿಂ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ನನ್ನ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ' ಎಂದು ಟ್ರಂಪ್ ಹೇಳಿದರು.