ಟೆಲ್ ಅವೀವ್: ಇಸ್ರೇಲ್ ಜೊತೆಗಿನ ಕದನಕ್ಕೆ ಶಾಂತಿ ಒಪ್ಪಂದದ ಮೂಲಕ ವಿರಾಮ ಸಿಕ್ಕ ಬೆನ್ನಲ್ಲೇ ಅತ್ತ ಹಮಾಸ್ ಬಂಡುಕೋರರು ಮತ್ತೆ ಬಾಲ ಬಿಚ್ಚಿದ್ದು 8 ಗಾಜಾ ನಿವಾಸಿಗಳನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಂದು ಹಾಕಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ವರ್ಷಗಳ ಕಾಲ ಇಸ್ರೇಲ್ ಸೇನೆ ಮತ್ತು ಹಮಾಸ್ ನಡುವಿನ ಸಂಘರ್ಷ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಕದನವಿರಾಮ ಘೋಷಿಸಲಾಗಿತ್ತು.
ಆದರೆ, ಆ ಕದನವಿರಾಮಕ್ಕೆ ಹಮಾಸ್ ಯಾವುದೇ ಬೆಲೆ ನೀಡದೆ ಕದನವಿರಾಮದ ಕೆಲವೇ ಗಂಟೆಗಳ ಬಳಿಕ ನಡುರಸ್ತೆಯಲ್ಲಿ 8 ಗಾಜಾ ನಿವಾಸಿಗಳನ್ನು ಹತ್ಯೆ ಮಾಡಿದೆ.
ಗಾಜಾದ 8 ಜನರ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ, ಅವರ ಕಣ್ಣಿಗೆ ಬಟ್ಟೆ ಕಟ್ಟಿ ನಡುರಸ್ತೆಯಲ್ಲೇ ಗುಂಡಿಟ್ಟು ಕೊಲ್ಲಲಾಗಿದೆ. ಸಂತ್ರಸ್ಥರನ್ನು ಅಪರಾಧಿಗಳು ಎಂದ ಹಮಾಸ್, ಇವರು ಇಸ್ರೇಲ್ ಸಹಯೋಗಿಗಳು ಎಂದು ಆರೋಪಿಸಿದೆ.
ಇನ್ನು ಇಸ್ರೇಲ್ ಜೊತೆಗಿನ ಕದನ ವಿರಾಮದ ನಂತರ ಗಾಜಾ ಪಟ್ಟಿಯ ಮೇಲಿನ ನಿಯಂತ್ರಣವನ್ನು ಉಳಿಸಿಕೊಳ್ಳಲು ಹಮಾಸ್ ಗುಂಪು ಇತರ ಸಶಸ್ತ್ರ ಪ್ಯಾಲೇಸ್ಟಿನಿಯನ್ ಕುಲಗಳೊಂದಿಗೆ ಘರ್ಷಣೆ ನಡೆಸುತ್ತಿದ್ದಂತೆ ಹಮಾಸ್‌ನ ಪ್ರತೀಕಾರದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಹಮಾಸ್ ಉಗ್ರರು ಬಂದೂಕುಗಳನ್ನು ಕೈಯಲ್ಲಿ ಹಿಡಿದುಕೊಂಡು ನಡುರಸ್ತೆಯಲ್ಲಿ ಸಾರ್ವಜನಿಕರಿಗೆ ಸಾಮೂಹಿಕ ಮರಣದಂಡನೆ ನೀಡುತ್ತಿದ್ದಾರೆ. ಆ ಮೃತದೇಹಗಳ ಸುತ್ತಲಿನ ಜನರು ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ವಿಡಿಯೋ ಸಂಚಲನ ಮೂಡಿಸಿದೆ.
ಅಮೆರಿಕ ಅಧ್ಯಕ್ಷ ಎಚ್ಚರಿಕೆಗೂ ಬಗ್ಗದ ಬಂಡುಕೋರರು
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಂಪನ್ನು ನಿಶ್ಯಸ್ತ್ರಗೊಳಿಸಲು ಪ್ರತಿಜ್ಞೆ ಮಾಡಿದ್ದರೂ ಸಹ, ಹಮಾಸ್ ಪ್ಯಾಲೇಸ್ಟಿನಿಯನ್ ಪ್ರದೇಶದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದೆ. ಪ್ಯಾಲೇಸ್ಟಿನಿಯನ್ ಪ್ರದೇಶದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ತೀವ್ರವಾಗಿ ಪ್ರಯತ್ನಿಸುತ್ತಿರುವುದರಿಂದ ಗಾಜಾದಲ್ಲಿ ಸಾಮೂಹಿಕವಾಗಿ ಸಾರ್ವಜನಿಕ ಮರಣದಂಡನೆಗಳನ್ನು ನಡೆಸುತ್ತಿದೆ.