ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾನ್ ವ್ಯಕ್ತಿ ಎಂದು ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ರಾಯಭಾರಿ-ನಿಯೋಜಿತ ಸೆರ್ಗಿಯೊ ಗೋರ್ ಮತ್ತು ಭಾರತದ ನಾಯಕರ ನಡುವಿನ ಇತ್ತೀಚಿನ ಮಾತುಕತೆ ಫಲಪ್ರದವಾಗಿತ್ತು ಎಂದು ಬಣ್ಣಿಸಿದ್ದಾರೆ.
ನಿನ್ನೆ ವಾಷಿಂಗ್ಟನ್ ನ ಓವಲ್ ಕಚೇರಿಯಲ್ಲಿ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತದ ನಾಯಕತ್ವ ಮತ್ತು ಅದರ ವಿಕಸನಗೊಳ್ಳುತ್ತಿರುವ ಜಾಗತಿಕ ನಿಲುವಿನ ಬಗ್ಗೆ, ವಿಶೇಷವಾಗಿ ರಷ್ಯಾದೊಂದಿಗಿನ ತೈಲ ವ್ಯಾಪಾರದ ಬಗ್ಗೆ ಪ್ರಸ್ತಾಪಿಸಿದರು.
ಪ್ರಧಾನಿ ಮೋದಿ ಅವರೊಂದಿಗೆ ಗೋರ್ ಅವರ ಚರ್ಚೆಗಳ ಕುರಿತು ಎಎನ್‌ಐ ಸುದ್ದಿಸಂಸ್ಥೆಯ ಪ್ರತಿನಿಧಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ಮೋದಿ ಒಬ್ಬ ಮಹಾನ್ ವ್ಯಕ್ತಿ. ನನ್ನನ್ನು ಪ್ರೀತಿಸುತ್ತಾರೆ ಎಂದು ನನಗೆ ಸೆರ್ಗಿಯೊ ಗೊರ್ ಹೇಳಿದರು. ಮೋದಿ ನಾಯಕತ್ವದಲ್ಲಿ ಭಾರತ ರಾಜಕೀಯ ಸ್ಥಿರತೆ ಕಂಡಿದೆ, ದೇಶವು ನಾಯಕತ್ವ ಬದಲಾವಣೆಗಳನ್ನು ಕಂಡಿತ್ತು ಎಂದು ನೆನಪಿಸಿಕೊಂಡರು.
ನಾನು ವರ್ಷಗಳಿಂದ ಭಾರತವನ್ನು ನೋಡುತ್ತಿದ್ದೇನೆ. ಅದು ಅದ್ಭುತ ದೇಶ. ಪ್ರತಿ ವರ್ಷ ನೀವು ಹೊಸ ನಾಯಕನನ್ನು ಹೊಂದಿರುತ್ತೀರಿ. ಕೆಲವರು ಕೆಲವು ತಿಂಗಳುಗಳ ಕಾಲ ಇಲ್ಲಿ ಇರುತ್ತಾರೆ. ವರ್ಷದಿಂದ ವರ್ಷಕ್ಕೆ ಅಲ್ಲಿ ಬದಲಾವಣೆ ಕಾಣುತ್ತಿದ್ದು, ನನ್ನ ಸ್ನೇಹಿತ ಈಗ ಬಹಳ ಸಮಯದಿಂದ ಅಧಿಕಾರದಲ್ಲಿದ್ದಾರೆ ಎಂದರು.
ಇಂಧನ ವಿಷಯಗಳಲ್ಲಿ ಅಮೆರಿಕಾ ಜೊತೆಗಿನ ಭಾರತದ ಸಹಕಾರವನ್ನು ಒತ್ತಿ ಹೇಳಿದ ಟ್ರಂಪ್, ಪ್ರಧಾನಿ ಮೋದಿ ಶೀಘ್ರದಲ್ಲೇ ರಷ್ಯಾದಿಂದ ತೈಲ ಆಮದುಗಳನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ರಷ್ಯಾದೊಂದಿಗಿನ ಭಾರತದ ತೈಲ ವ್ಯಾಪಾರವನ್ನು ಕೊನೆಗೊಳಿಸುವುದರಿಂದ ಉಕ್ರೇನ್‌ನಲ್ಲಿ ಸಂಘರ್ಷವನ್ನು ಕೊನೆಗೊಳಿಸಲು ಅಂತಾರಾಷ್ಟ್ರೀಯ ಪ್ರಯತ್ನಗಳು ಬಲಗೊಳ್ಳುತ್ತವೆ ಎಂದು ಟ್ರಂಪ್ ಒತ್ತಿ ಹೇಳಿದರು.
ಅಮೆರಿಕ ಸಂಯುಕ್ತ ಸಂಸ್ಥಾನದಾದ್ಯಂತ ಹಿಂಸಾತ್ಮಕ ಅಪರಾಧಗಳನ್ನು ಎದುರಿಸಲು ಆಡಳಿತದ ಉಪಕ್ರಮಗಳ ಮೇಲೆ ಪ್ರಾಥಮಿಕವಾಗಿ ಕೇಂದ್ರೀಕೃತವಾಗಿದ್ದ ಈ ಮಾತುಕತೆ, ಅಮೆರಿಕ-ಭಾರತ ಸಂಬಂಧದ ಬೆಳೆಯುತ್ತಿರುವ ಆಳ ಮತ್ತು ಪ್ರಧಾನಿ ಮೋದಿ ಅವರೊಂದಿಗಿನ ನಿರಂತರ ಬಾಂಧವ್ಯವನ್ನು ಎತ್ತಿ ತೋರಿಸಲು ಟ್ರಂಪ್‌ಗೆ ವೇದಿಕೆಯಾಗಿಯೂ ಕಾರ್ಯನಿರ್ವಹಿಸಿತು.