ವಾಷಿಂಗ್ಟನ್: ಅನಿವಾಸಿ ಭಾರತೀಯರೊಂದಿಗೆ ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೀಪಾವಳಿ ಆಚರಿಸಿದ್ದು, ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದ್ದಾರೆ.
ದೀಪಾವಳಿ ಹಿನ್ನೆಲೆ ಅಮೆರಿಕಾದ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಕ್ಯಾಂಡಲ್‌ನಿಂದ ದೀಪ ಹಚ್ಚಿ ದೀಪ ಬೆಳಗಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಮಾತನಾಡಿರುವುದಾಗಿ ತಿಳಿಸಿದರು.
ಭಾರತದ ಜನತೆಗೆ ದೀಪಾವಳಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ನಾನು ಇಂದು (ಅ.20) ನಿಮ್ಮ ಪ್ರಧಾನ ಮಂತ್ರಿ ಮೋದಿಯವರೊಂದಿಗೆ ಮಾತನಾಡಿದೆ. ನಮ್ಮ ಸಂಭಾಷಣೆ ಬಹಳ ಉತ್ತಮವಾಗಿತ್ತು. ನಾವು ವ್ಯಾಪಾರದ ಬಗ್ಗೆ ಮಾತನಾಡಿದೆವು. ಆ ಬಗ್ಗೆ ಅವರು ಬಹಳ ಆಸಕ್ತಿ ಹೊಂದಿದ್ದಾರೆ.
ಸ್ವಲ್ಪ ಸಮಯದ ಹಿಂದೆ, ನಾವು ಪಾಕಿಸ್ತಾನದೊಂದಿಗೆ ಯಾವುದೇ ಯುದ್ಧ ಬೇಡ ಎಂದು ಮಾತನಾಡಿಕೊಂಡಿದ್ದೆವು. ಈ ವೇಳೆ ವ್ಯಾಪಾರದ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಯುದ್ಧ ನಡೆಯೋದಿಲ್ಲ. ಇದು ಬಹಳ, ಬಹಳ ಒಳ್ಳೆಯ ವಿಷಯ ಎಂದು ಹೇಳಿದರು.
ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ನನಗೆ ಒಬ್ಬ ಉತ್ತಮ ಸ್ನೇಹಿತರಾಗಿದ್ದಾರೆ. ದೀಪ ಬೆಳಗಿಸುವುದು ನಾವು ಕತ್ತಲೆಯ ಮೇಲೆ ಬೆಳಕಿನ ವಿಜಯದ ನಂಬಿಕೆಯ ಸಂಕೇತವಾಗಿ ದೀಪವನ್ನು ಬೆಳಗುತ್ತೇವೆ. ಇದು ಅಜ್ಞಾನದ ಮೇಲೆ ಜ್ಞಾನ ಮತ್ತು ಕೆಡುಕಿನ ಮೇಲೆ ಒಳ್ಳೆಯತನದ ವಿಜಯ.
ದೀಪಾವಳಿಯ ಸಮಯದಲ್ಲಿ, ಸಂಭ್ರಮಿಸುವವರು ಶತ್ರುಗಳನ್ನು ಸೋಲಿಸಿದ, ಅಡೆತಡೆಗಳನ್ನು ನಿವಾರಿಸಿದ ಮತ್ತು ಬಂಧಿತರನ್ನು ಬಿಡುಗಡೆ ಮಾಡಿದ ಪ್ರಾಚೀನ ಕಥೆಗಳನ್ನು ಸ್ಮರಿಸಲಾಗುತ್ತದೆ. ಬುದ್ಧಿವಂತಿಕೆಯ ಮಾರ್ಗವನ್ನು ಹುಡುಕಲು, ಶ್ರದ್ಧೆಯಿಂದ ಕೆಲಸ ಮಾಡಲು ದೀಪ ಜ್ವಾಲೆ ನೆನಪಿಸುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಚೀನಾಗೆ ಸುಂಕ ವಿಧಿಸಿದ ಬಗ್ಗೆಯೂ ಮಾತನಾಡಿದ ಅವರು, ನವೆಂಬರ್ 1 ರಿಂದ ಚೀನಾದ ಮೇಲೆ ಶೇಕಡಾ 155ರಷ್ಟು ಸುಂಕ ವಿಧಿಸಲಾಗುವುದು. ಇದನ್ನು ತಡೆಯಲು ಚೀನಾಗೆ ಸಾಧ್ಯವಿಲ್ಲ. ಚೀನಾ ಮತ್ತು ಇತರ ದೇಶಗಳು ಅಮೆರಿಕಾವನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಆರೋಪಿಸಿದರು.
ʻಯುರೋಪಿಯನ್ ಯೂನಿಯನ್, ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ಉತ್ತಮ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ಸುಂಕಗಳು ರಾಷ್ಟ್ರೀಯ ಭದ್ರತೆಗೆ ಮುಖ್ಯ. ಸುಂಕಗಳ ಮೂಲಕ ಅಮೆರಿಕಕ್ಕೆ ನೂರಾರು ಬಿಲಿಯನ್, ಟ್ರಿಲಿಯನ್ ಡಾಲರ್‌ಗಳಷ್ಟು ಹಣ ಬರುತ್ತಿದೆ. ಈ ಹಣವನ್ನು ಬಳಸಿ ಅಮೆರಿಕದ ಸಾಲವನ್ನು ತೀರಿಸಲಾಗುವುದು ಎಂದು ಹೇಳಿದರು.
ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ಅವರು ಮಾತನಾಡಿ, ಅಧ್ಯಕ್ಷ ಟ್ರಂಪ್‌ಗೆ ಧನ್ಯವಾದ ಅರ್ಪಿಸಿದರು.
ದೀಪಾವಳಿಯ ಸಂದರ್ಭದಲ್ಲಿ ಶ್ವೇತಭವನ, ಓವಲ್ ಕಚೇರಿ ಮತ್ತು ತಮ್ಮ ಸ್ವಂತ ಮನೆಯ ಬಾಗಿಲುಗಳನ್ನು ತೆರೆಯುವುದು ವೈವಿಧ್ಯತೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ. ದೀಪಾವಳಿಯ ಬೆಳಕು ಅಮೆರಿಕದ ಯಶಸ್ಸು ಮತ್ತು ಭಾರತ-ಅಮೆರಿಕಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.
ಇನ್ನು ಟ್ರಂಪ್ ಅವರ ದೀಪಾವಳಿ ಶುಭಾಶಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಫೋನ್ ಕರೆ ಹಾಗೂ ದೀಪಾವಳಿ ಶುಭಾಶಯಕ್ಕೆ ಧನ್ಯವಾದಗಳು. ಎರಡೂ ರಾಷ್ಟ್ರಗಳು ಜಗತ್ತನ್ನು ಭರವಸೆಯಿಂದ ಬೆಳಗಿಸುವುದನ್ನು ಮುಂದುವರಿಸಲಿ. ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲಿ ಎಂದು ತಿಳಿಸಿದ್ದಾರೆ.