ಕಾಬೂಲ್: ಭಾರತದ ನಂತರ ಇದೀಗ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಿಂದಲೂ ಪಾಕಿಸ್ತಾನಕ್ಕೆ 'ಜಲಬಾಂಬ್' ಹಾಕಲಾಗಿದೆ. ಅಣೆಕಟ್ಟು ನಿರ್ಮಿಸಲು ಮತ್ತು ಪಾಕಿಸ್ತಾನಕ್ಕೆ ನದಿ ನೀರನ್ನು ನಿರ್ಬಂಧಿಸಲು ಯೋಜಿಸುತ್ತಿದೆ. ಕುನಾರ್ ನದಿಗೆ "ಸಾಧ್ಯವಾದಷ್ಟು ಬೇಗನೆ ಅಣೆಕಟ್ಟನ್ನು ನಿರ್ಮಿಸುವ ಆದೇಶವನ್ನು ತಾಲಿಬಾನ್ ಸುಪ್ರೀಂ ನಾಯಕ ಮೌಲಾವಿ ಹಿಬತುಲ್ಲಾ ಅಖುಂದ್ಜಾದಾ ಹೊರಡಿಸಿದ್ದಾರೆ.
ಭಾರತದ ನಿರ್ಧಾರದಂತೆ ಅಪ್ಘಾನಿಸ್ತಾನ ನಿರ್ಧಾರ:
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಇತ್ತೀಚಿಗೆ ನಡೆದ ಯುದ್ಧದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಈ ಆದೇಶ ಬಂದಿದೆ. ಪಾಕಿಸ್ತಾನದೊಂದಿಗೆ ನೀರು ಹಂಚಿಕೆಯ ಬಗ್ಗೆ ಭಾರತದ ನಿರ್ಧಾರದಂತೆ ಇದೀಗ ಅಪ್ಘಾನಿಸ್ತಾನವೂ ನಿರ್ಧಾರ ತೆಗೆದುಕೊಂಡಿದೆ.
ಕುನಾರ್ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ಆದೇಶ:
ಕುನಾರ್ ನದಿಗೆ ಅಣೆಕಟ್ಟು ನಿರ್ಮಾಣವನ್ನು ಆದಷ್ಟು ಬೇಗ ಪ್ರಾರಂಭಿಸಲು ಮತ್ತು ದೇಶೀಯ ಕಂಪನಿಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವಂತೆ ಸುಪ್ರೀಂ ಲೀಡರ್ ಅಖುಂದ್ಜಾದಾ ಅವರು ಜಲ ಮತ್ತು ಇಂಧನ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ ಎಂದು ಆಫ್ಘಾನ್ ಮಾಹಿತಿ ಸಚಿವಾಲಯ ಉಪ ಸಚಿವ ಮುಹಜೀರ್ ಫರಾಹಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಗುರುವಾರ ತಿಳಿಸಿದ್ದಾರೆ.
ಭಾರತದ ನಂತರ ಈಗ ಅಪ್ಘಾನಿಸ್ತಾದಿಂದ ಪಾಕಿಸ್ತಾನಕ್ಕೆ ನೀರು ಪೂರೈಕೆ ನಿರ್ಬಂಧಿಸುವ ಸರದಿ ಎಂದು ಲಂಡನ್ ಮೂಲದ ಆಫ್ಘಾನಿಸ್ತಾನದ ಪತ್ರಕರ್ತ ಸಾಮಿ ಯೂಸುಫ್‌ಜಾಯ್ ಹೇಳಿದ್ದಾರೆ.
480-ಕಿಮೀ ಉದ್ದದ ಕುನಾರ್ ನದಿಯು ಈಶಾನ್ಯ ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತಗಳಲ್ಲಿ ಪಾಕಿಸ್ತಾನದ ಗಡಿಗೆ ಸಮೀಪವಿರುವ ಬ್ರೋಘಿಲ್ ಪಾಸ್ ಬಳಿ ಹುಟ್ಟುತ್ತದೆ. ಇದು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾವನ್ನು ದಾಟುವ ಮೊದಲು ಕುನಾರ್ ಮತ್ತು ನಂಗರ್ಹಾರ್ ಪ್ರಾಂತ್ಯಗಳ ಮೂಲಕ ದಕ್ಷಿಣಕ್ಕೆ ಹರಿಯುತ್ತದೆ. ಅಲ್ಲಿ ಇದು ಜಲಾಲಾಬಾದ್ ನಗರದ ಬಳಿ ಕಾಬೂಲ್ ನದಿಯನ್ನು ಸೇರುತ್ತದೆ. ಕುನಾರ್ ಅನ್ನು ಪಾಕಿಸ್ತಾನದಲ್ಲಿ ಚಿತ್ರಾಲ್ ನದಿ ಎಂದು ಕರೆಯಲಾಗುತ್ತದೆ.
ಕುನಾರ್ ಹರಿಯುವ ಕಾಬೂಲ್ ನದಿಯು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಅತಿ ದೊಡ್ಡ ಗಡಿಯಾಚೆಗಿನ ನದಿಯಾಗಿದೆ. ಕಾಬೂಲ್ ನದಿಯು ಅಟಾಕ್ ಬಳಿ ಸಿಂಧೂ ನದಿಯನ್ನು ಸೇರುತ್ತದೆ ಮತ್ತು ಪಾಕಿಸ್ತಾನದ ವಿಶೇಷವಾಗಿ ಅದರ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನೀರಾವರಿ ಮತ್ತು ಇತರ ನೀರಿನ ಅಗತ್ಯಗಳಿಗೆ ನಿರ್ಣಾಯಕವಾಗಿದೆ. ಕುನಾರ್ ನದಿಯ ನೀರಿನ ಹರಿವಿನ ಕಡಿತವು ಸಿಂಧೂ ನದಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ.ಇದರಿಂದಾಗಿ ಪಂಜಾಬ್‌ಗೂ ಹೊಡೆತ ಬೀಳುತ್ತದೆ.
ಪಾಕಿಸ್ತಾನಕ್ಕೆ ಹರಿಯುವ ಕಾಬೂಲ್ ಮತ್ತು ಕುನಾರ್ ನದಿಗಳು ಪಾಕಿಸ್ತಾನದಲ್ಲಿ ಬಹಳ ಹಿಂದಿನಿಂದಲೂ ನೀರಿನ ಮೂಲವಾಗಿದೆ" ಎಂದು ಲಂಡನ್ ಮೂಲದ ಆಫ್ಘನ್ ಪತ್ರಕರ್ತ ಸಾಮಿ ಯೂಸಫ್‌ಜಾಯ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.