ಪಾಕಿಸ್ತಾನದಲ್ಲಿ ಕೇಂದ್ರ ಗುಪ್ತಚರ ಸಂಸ್ಥೆ(CIA)ಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದ ಮಾಜಿ ಕೇಂದ್ರ ಗುಪ್ತಚರ ಸಂಸ್ಥೆ (CIA) ಅಧಿಕಾರಿ ಜಾನ್ ಕಿರಿಯಾಕೌ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಭಾರತದೊಂದಿಗೆ ಯುದ್ಧ ಮಾಡಲು ನಿರ್ಧರಿಸಿದರೆ ಸೋಲು ನಿಶ್ಚಿತ ಎಂದಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಿರಿಯಾಕೌ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಿಂದ ಏನೂ ಒಳ್ಳೆಯದಾಗುವುದಿಲ್ಲ, ಏಕೆಂದರೆ ಪಾಕಿಸ್ತಾನಿಗಳು ಸೋಲುತ್ತಾರೆ. ಇಲ್ಲಿ ವಿಷಯ ಸರಳವಾಗಿದೆ ಎಂದು ಹೇಳಿದರು.
15 ವರ್ಷಗಳ ಕಾಲ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ತಮ್ಮ ವೃತ್ತಿಜೀವನದ ಸಂಪೂರ್ಣ ದ್ವಿತೀಯಾರ್ಧವನ್ನು ಕಳೆದ ಕಿರಿಯಾಕೌ, ಪಾಕಿಸ್ತಾನವು ಭಾರತೀಯರನ್ನು ಪ್ರಚೋದಿಸುವುದನ್ನು ನಿಲ್ಲಿಸಿ ಎಂದು ಕರೆ ನೀಡಿದ್ದಾರೆ.
ಪಾಕಿಸ್ತಾನ ಸೋಲುತ್ತದೆ. ನಾನು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಾಂಪ್ರದಾಯಿಕ ಯುದ್ಧದ ಬಗ್ಗೆ ಮಾತನಾಡುತ್ತಿದ್ದೇನೆ. ಆದ್ದರಿಂದ ಭಾರತೀಯರನ್ನು ನಿರಂತರವಾಗಿ ಪ್ರಚೋದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
2002 ರಲ್ಲಿ ಕಿರಿಯಾಕೌ ಪಾಕಿಸ್ತಾನದಲ್ಲಿದ್ದಾಗ, ಅಮೆರಿಕ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸುತ್ತದೆ ಎಂದು ಅನಧಿಕೃತವಾಗಿ ಹೇಳುತ್ತಿದ್ದರು ಎಂದರು.
ಪಾಕ್ ಪರಮಾಣು ಶಸ್ತ್ರಾಗಾರದ ಮೇಲೆ ಅಮೆರಿಕ ನಿಯಂತ್ರಣ ಹೊಂದಿತ್ತು
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಅವರ ಆಡಳಿತದ ಸಂದರ್ಭದಲ್ಲಿ ಅಮೆರಿಕ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಮೇಲೆ ನಿಯಂತ್ರಣ ಹೊಂದಿತ್ತು ಎಂದು ಸಹ ಗಂಭೀರ ಆರೋಪ ಮಾಡಿದ್ದಾರೆ.
ಒಂದು ಕಾಲದಲ್ಲಿ ಪರ್ವೇಜ್ ಮುಷರಫ್ ಸರ್ಕಾರವನ್ನ ಖರೀದಿಸಲು ಅಮೆರಿಕ ಹೇಗೆ ಪಾಕಿಸ್ತಾನಕ್ಕೆ ಲಕ್ಷಾಂತರ ರೂಪಾಯಿ ನೆರವು ನೀಡಿತ್ತು ಅನ್ನೋ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಪಾಕಿಸ್ತಾನವು (Pakistan) ಭ್ರಷ್ಟಾಚಾರದ ಅಡಿಯಲ್ಲಿ ಹೂತುಹೋಗಿದೆ. ಅಲ್ಲಿನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರಂತಹ ನಾಯಕರು ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರೆ, ಇತ್ತ ದೇಶದ ಸಾಮಾನ್ಯ ನಾಗರಿಕರು ಬಳಲುತ್ತಿದ್ದರು ಎಂದು ಬೇಸರ ಹೊರಹಾಕಿದ್ದಾರೆ.
ಈ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿದೆಯೇ ಎಂಬ ಬಗ್ಗೆ ಕೇಳಿದಾಗ, ಆ ಬಗ್ಗೆ ಅನುಮಾನವಿದೆ ಎಂದರು.
ಪಾಕಿಸ್ತಾನಿಗಳು ತಮ್ಮ ಸ್ವಂತ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸುತ್ತಾರೆ ಎಂದು ಸಾರ್ವಜನಿಕವಾಗಿ ಹೇಳುತ್ತಿರುವುದರಿಂದ ಪಾಕಿಸ್ತಾನಿ ಪರಮಾಣುಗಳ ನಿಯಂತ್ರಣವು ಅಮೆರಿಕದ ಬಳಿಯೇ ಇದೆ ಎಂದು ಅಮೆರಿಕನ್ನರು ಭಾರತಕ್ಕೆ ಎಂದಾದರೂ ಹೇಳಿದ್ದಾರೆಯೇ ಎಂದು ನನಗೆ ಸಂದೇಹವಿದೆ. ವಿದೇಶಾಂಗ ಇಲಾಖೆ ಎರಡೂ ಕಡೆಯವರಿಗೆ ಹೇಳುತ್ತಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಪರಿಚಯಿಸಿದರೆ, ಇಡೀ ಜಗತ್ತು ಬದಲಾಗಲಿದೆ. ಆದ್ದರಿಂದ ಎರಡೂ ಕಡೆಗಳಲ್ಲಿ ಸಂಯಮವಿತ್ತು ಎಂದು ನಾನು ಭಾವಿಸುತ್ತೇನೆ ಎಂದರು.
2001 ರ ಸಂಸತ್ತಿನ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಹೋಗುತ್ತವೆ ಎಂದು ಸಿಐಎ ನಂಬಿತ್ತು ಎಂದು ಕಿರಿಯಾಕೌ ನೆನಪಿಸಿಕೊಂಡರು.
2016ರಲ್ಲಿ ಸರ್ಜಿಕಲ್ ಸ್ಟ್ರೈಕ್, 2019ರಲ್ಲಿ ಬಾಲಕೋಟ್ ದಾಳಿ ಹಾಗೂ ಪ್ರಸ್ತುತ ವರ್ಷ ಅಂದರೆ 2025ರಲ್ಲಿ ಭಾರತದ ಪಹಲ್ಗಾಮ್ಗೆ ದಾಳಿ ಮಾಡಿ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿ, ನಂತರ ಆಪರೇಷನ್ ಸಿಂಧೂರದ ಸೇರಿದಂತೆ ಹಲವು ವರ್ಷಗಳಿಂದ ಗಡಿಯಾಚೆಯಿಂದ ಭಯೋತ್ಪಾದಕರು ನಡೆಸಿದ ದಾಳಿಗಳಿಂದ ಭಾರತ ಹಿಂದೆ ಸರಿದಿಲ್ಲ, ಅದಕ್ಕೆ ತಕ್ಕ ಉತ್ತರವನ್ನು ನೀಡಿದೆ ಎಂದು ಹೇಳಿದ್ದಾರೆ.
ಈ ಎಲ್ಲ ದಾಳಿಗಳಿಂದ ವಿಫಲವಾದ ನಂತರ ಪಾಕಿಸ್ತಾನ ಕೊನೆಗೆ ಕದನ ವಿರಾಮದ ದಾರಿಯಲ್ಲಿ ಸಾಗುತ್ತದೆ. ಭಾರತವನ್ನು ವಿರೋಧಿಸುವ ಹಾಗೂ ಅವರ ವಿರುದ್ಧ ಯುದ್ಧ ಮಾಡುವ ತಾಕತ್ತು ಪಾಕಿಸ್ತಾನಕ್ಕೆ ಇಲ್ಲ. ಭಾರತದಂತಹ ಮಿಲಿಟರಿ ಪವರ್ ಪಾಕಿಸ್ತಾನ ಹೊಂದಿಲ್ಲ. ಪಾಕಿಸ್ತಾನ ಪ್ರತಿ ಬಾರಿ ಭಾರತಕ್ಕೆ ಪರಮಾಣು ಬೆದರಿಕೆಯನ್ನು ಹಾಕಿಕೊಂಡು ಬಂದಿದೆ, ಆದರೆ ಭಾರತ ಈ ಬೆದರಿಕೆಗೆ ಯಾವತ್ತೂ ಭಯಪಟ್ಟಿಲ್ಲ, ಹಾಗೂ ಪಾಕ್ ಮಾತನ್ನು ಲೆಕ್ಕಕ್ಕೂ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.