ಗಾಜಾ ಕದನ ವಿರಾಮ ಜಾರಿಗೆ ಬಂದು ಮೂರು ವಾರಗಳು ಕಳೆದಿಲ್ಲ, ಆಗಲೇ ಎರಡೂ ಕಡೆಯವರು ಪರಸ್ಪರ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಇಸ್ರೇಲ್ ಗಾಜಾ ಪಟ್ಟಿ ಪ್ರದೇಶದ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿದೆ.
ಅಮೆರಿಕದ ಮಧ್ಯಸ್ಥಿಕೆಯಿಂದ ಜಾರಿಯಲ್ಲಿದ್ದ ಕದನ ವಿರಾಮದ ನಡುವೆಯೂ ಮಂಗಳವಾರ ಇಸ್ರೇಲ್ ಗಾಜಾದಲ್ಲಿ ವಾಯುದಾಳಿ ನಡೆಸಿದೆ ಎಂದು ಗಾಜಾದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. ಈ ದಾಳಿಯಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್‌ನಿಂದ ಇಸ್ರೇಲ್ ಸೈನಿಕರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಬಲ ದಾಳಿ ನಡೆಸಲು ಆದೇಶಿಸಿದ್ದಾರೆ.
ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಮೂರು ವೈಮಾನಿಕ ದಾಳಿಗಳು ನಡೆದಿದ್ದು, ಒಂದು ದಾಳಿಯಲ್ಲಿ ವಾಹನವೊಂದಕ್ಕೆ ತಾಗಿ ಐವರು ಸಾವನ್ನಪ್ಪಿದ್ದಾರೆ. ಗಾಜಾದ ಪ್ರಮುಖ ಆಸ್ಪತ್ರೆಯಾದ ಅಲ್-ಶಿಫಾದ ಬಳಿಯೂ ಒಂದು ದಾಳಿ ನಡೆದಿದೆ. ಆದರೆ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಕೆಲವು ಚಕಮಕಿಗಳಿದ್ದರೂ ಶಾಂತಿ ಒಪ್ಪಂದ ಉಳಿದಿದೆ ಎಂದು ಹೇಳಿದ್ದಾರೆ. ಹಮಾಸ್ ಆರೋಪಗಳನ್ನು ನಿರಾಕರಿಸಿದ್ದು "ರಫಾದಲ್ಲಿ ನಡೆದ ಗುಂಡಿನ ದಾಳಿ ಘಟನೆಗೆ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದೆ.
ಗಾಜಾ ಕದನ ವಿರಾಮಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಗಾಜಾ ಮೇಲೆ ಕೂಡಲೇ ಪ್ರಬಲ ದಾಳಿ ನಡೆಸುವಂತೆ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ಹೊರಡಿಸಿದ್ದರು. ಈ ಕುರಿತು ಏರ್‌ಪೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಗಾಜಾ ಒಪ್ಪಂದಕ್ಕೆ ಅಪಾಯವಿಲ್ಲ. ಒಂದು ವೇಳೆ ಇಸ್ರೇಲ್ ಸೈನಿಕರು ಮೃತಪಟ್ಟಿದ್ದರೆ ಪ್ರತಿದಾಳಿ ನಡೆಸಬೇಕು’ ಎಂದು ಹೇಳಿದ್ದಾರೆ.