ವಾಷಿಂಗ್ಟನ್: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ "Brahmins" ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಶಾಕಿಂಗ್ ಹೇಳಿಕೆ ನೀಡಿದ್ದು, ಈ ಮೂಲಕ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಭಾರತದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ ಮಹಾನ್ ನಾಯಕ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವಾಗ ಅವರು ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಜೊತೆ ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ನಾನು ಭಾರತೀಯ ಜನರಿಗೆ ಹೇಳುತ್ತೇನೆ, ದಯವಿಟ್ಟು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಭಾರತೀಯ ಜನರ ವೆಚ್ಚದಲ್ಲಿ ಬ್ರಾಹ್ಮಿನ್ಸ್ ಲಾಭ ಗಳಿಸಿ ಶ್ರೀಮಂತರಾಗುತ್ತಿದ್ದಾರೆ. ಇದನ್ನು ನಾವು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಭಾರತ, ಚೀನಾ, ರಷ್ಯಾ ಸೇರಿ ವಿಶ್ವದ ಹಲವು ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿರುದ್ಧ ಅಮೆರಿಕಾ ತೆರಿಗೆ ಯುದ್ಧ ಆರಂಭಿಸಿದೆ, ರಷ್ಯಾದಿಂದ ಭಾರತದ ತೈಲ ಖರೀದಿ ಮುಂದಿಟ್ಟಿಕೊಂಡೇ ಭಾರತದ ಮೇಲೆ ಟ್ರಂಪ್ ಶೇ.25ರಷ್ಟು ಹೆಚ್ಚುವರಿ ತೆರಿಗೆ ಘೋಷಿಸಿದ್ದಾರೆ.
ಅದರ ಬೆನ್ನಲ್ಲೇ ಚೀನಾದಲ್ಲಿ ಶಾಂಘೈ ಶೃಂಗಸಭೆ ನಡೆಯುತ್ತಿದ್ದು, ಈ ಶೃಂಗಸಭೆಯನ್ನು ಗ್ಲೋಬಲ್ ಸೌತ್ ದೇಶಗಳು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಂಡಿವೆ. ಈ ನಡುವೆ ಭಾರತೀಯರನ್ನು ಪ್ರಚೋದಿಸಲು ಪೀಟರ್ ನವರೊ ಅವರು ಈ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಅಮೆರಿಕಾದಲ್ಲಿ ಬಳಕೆಯಲ್ಲಿರುವ ‘Brahmin’ ಪದದ ಅರ್ಥವೇನು?
ಭಾರತದಲ್ಲಿ ಬ್ರಾಹ್ಮಣರು ಎಂದರೆ ಒಂದು ವರ್ಗದ ಜನ. ಹಿಂದೂ ಧರ್ಮದ ಅರ್ಚಕರು, ವೇದಗಳು ಮತ್ತು ಧಾರ್ಮಿಕ ವಿಧಿಗಳನ್ನು ಪಾಲಿಸುವವರನ್ನು ಬ್ರಾಹ್ಮಣರು ಎಂದು ಕರೆಯಲಾಗುತ್ತದೆ. ಇದೇ ಪದ ಅಮೆರಿಕಾದಲ್ಲೂ ಬಳಕೆಯಲ್ಲಿದೆ. ಆದರೆ, ಇಲ್ಲಿ ಬಳಕೆಯಾಗುವ ಈ ಪದದ ಅರ್ಥವೇ ಬೇರೆಯಾಗಿದೆ. ಅಮೆರಿಕಾದಲ್ಲಿ ಶ್ರೀಮಂತರನ್ನು ಉಲ್ಲೇಖಿಸಲು ಈ ಪದವನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ, ಭಾರತದ ವಿಚಾರದಲ್ಲಿ ಅಮೆರಿಕದ ಸರ್ಕಾರದ ಅರ್ಥಶಾಸ್ತ್ರಜ್ಞರು ಈ ಪದ ಬಳಸಿದ್ದು ಆಕಸ್ಮಿಕವಲ್ಲ.
‘‘ಬೋಸ್ಟನ್ ಬ್ರಾಹ್ಮಿನ್’’ ಎಂಬುದು ಅಮೆರಿಕದ ನ್ಯೂ ಇಂಗ್ಲೆಂಡ್‌ನ ಶ್ರೀಮಂತ ಗಣ್ಯರನ್ನು ಉಲ್ಲೇಖಿಸಲು ವ್ಯಾಪಕವಾಗಿ ಬಳಸುತ್ತಿದ್ದ ಪದವಾಗಿತ್ತು. ಇಂಗ್ಲಿಷ್ ಜಗತ್ತಿನಲ್ಲಿ ಸಾಮಾಜಿಕ ಅಥವಾ ಆರ್ಥಿಕವಾಗಿ ಶ್ರೀಮಂತರನ್ನು ಸೂಚಿಸಲು ಬಳಸುವ ಪದ ‘‘ಬೋಸ್ಟನ್ ಬ್ರಾಹ್ಮಿನ್’’ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಸಾಗರಿಕಾ ಘೋಷ್ ವಿವರಿಸಿದ್ದಾರೆ.