ಬೀಜಿಂಗ್: ಚೀನಾದಲ್ಲಿ ನಡೆದ ಶಾಂಘೈ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಪ್ತವಾಗಿ ಕಾಣಿಸಿಕೊಂಡಿದ್ದು ಅಮೆರಿಕಾ ಮತ್ತು ಪಾಕಿಸ್ತಾನದ ನಿದ್ದೆ ಕೆಡುವಂತೆ ಮಾಡಿದೆ.
ಶಾಂಘೈ ಶೃಂಗಸಭೆಯಲ್ಲಿ ಭಾಗಿಯಾದ ಮೋದಿ ಹಾಗೂ ಪುಟಿನ್ ಅವರು, ಬಳಿಕ ಒಂದೇ ಕಾರಿನಲ್ಲಿ ಪ್ರಯಾಣಿಸಿ ಖಾಸಗಿಯಾಗಿ 45 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಇದು ವಿಶ್ವದ ಗಮನ ಸೆಳೆದಿತ್ತು.
ಇದರ ಬೆನ್ನಲ್ಲೇ ಬೀಜಿಂಗ್ ನಲ್ಲಿ ನಡೆದ ರಷ್ಯಾ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು, ರಷ್ಯಾ ಹಾಗೂ ಪಾಕಿಸ್ತಾನದ ಸಂಬಂಧವನ್ನು ಗಟ್ಟಿಗೊಳಿಸುವ ಕುರಿತು ಮಾತಗಳನ್ನಾಡಿದ್ದಾರೆ. ಈ ವೇಳೆ ಶೆಹಬಾಜ್ ಷರೀಫ್ ಆಡಿರುವ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಮ್ಮ ಹಾಗೂ ಭಾರತ ನಡುವಿನ ಸಂಬಂಧಕ್ಕೆ ನಮ್ಮ ತಕರಾರಿಲ್ಲ. ಆದರೆ, ಪಾಕಿಸ್ತಾನ ಹಾಗೂ ರಷ್ಯಾದ ಸಂಬಂಧವನ್ನು ಗಟ್ಟಿಗೊಳಿಸಲು ನಾವು ಬಯಸುತ್ತಿದ್ದೇವೆಂದು ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ.
ಕಷ್ಟದ ಸಮಯದಲ್ಲಿ ಪಾಕಿಸ್ತಾನದ ಬೆಂಬಲಕ್ಕೆ ನಿಂತ ರಷ್ಯಾಗೆ ನಮ್ಮ ಧನ್ಯವಾದ. ನಾವು ರಷ್ಯಾ ಹಾಗೂ ಭಾರತದ ನಡುವಿನ ಸಂಬಂಧಗಳನ್ನು ಗೌರವಿಸುತ್ತೇವೆ. ಆ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ಅದು ಒಳ್ಳೆಯದೇ. ಆದರೆ, ನಾವು ಕೂಡ ರಷ್ಯಾದೊಂದಿಗೆ ಅದೇ ರೀತಿಯ ಉತ್ತಮ ಬಾಂಧವ್ಯ ಹೊಂದಲು, ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಬಯಸುತ್ತೇವೆಂದು ತಿಳಿಸಿದ್ದಾರೆ.
ಶಾಂಘೈ ಶೃಂಗಸಭೆಯಲ್ಲಿ ಮಾತನಾಡಿದ ಮೋದಿಯವರು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಮ್ಮುಖದಲ್ಲೇ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದರು.
ಕಳೆದ 4 ದಶಕಗಳಿಂದ ಭಯೋತ್ಪಾದನೆಯ ಭಾರವನ್ನು ಭಾರತ ಹೊರುತ್ತಿದೆ. ಇತ್ತೀಚೆಗೆ, ಪಹಲ್ಗಾಮ್‌ನಲ್ಲಿ ಭಯೋತ್ಪಾದನೆಯ ಕರಾಳ ಮುಖವನ್ನು ನಾವೆಲ್ಲರೂ ನೋಡಿದ್ದೇವೆ. ಈ ದುಃಖದ ಸಮಯದಲ್ಲಿ ನಮ್ಮೊಂದಿಗೆ ನಿಂತ ಸ್ನೇಹಪರ ದೇಶಕ್ಕೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಪಹಲ್ಗಾಮ್ ದಾಳಿಯು ಮಾನವೀಯತೆಯಲ್ಲಿ ನಂಬಿಕೆ ಇಡುವ ಪ್ರತಿಯೊಂದು ದೇಶ ಮತ್ತು ವ್ಯಕ್ತಿಗೆ ಬಹಿರಂಗ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ, ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲ ನೀಡುವುದನ್ನು ನಾವು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಪ್ರತಿಯೊಂದು ರೂಪ ಮತ್ತು ಬಣ್ಣದಲ್ಲೂ ಭಯೋತ್ಪಾದನೆಯನ್ನು ನಾವು ಸರ್ವಾನುಮತದಿಂದ ವಿರೋಧಿಸಬೇಕು. ಇದು ಮಾನವೀಯತೆಯ ಕಡೆಗೆ ನಮ್ಮ ಕರ್ತವ್ಯ ಎಂದು ಹೇಳಿದ್ದರು.
ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ನೇರವಾಗಿ ಹೆಸರಿಸದೆ, "ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗ ಬೆಂಬಲ ನೀಡುವುದನ್ನು" ಸಹಿಸಬಹುದೇ ಎಂದು ಪ್ರಶ್ನಿಸಿದ್ದರು.
ಯಾವುದೇ ದೇಶದ ಅಭಿವೃದ್ಧಿಯ ಆಧಾರ ಅದರ ಭದ್ರತೆ, ಶಾಂತಿ ಮತ್ತು ಸ್ಥಿರತೆ ಮೇಲೆ ನಿಂತಿರುತ್ತದೆ. ಆದರೆ, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದ ಈ ಹಾದಿಯಲ್ಲಿ ದೊಡ್ಡ ಸವಾಲುಗಳಾಗಿವೆ. ಭಯೋತ್ಪಾದನೆಯು ಕೇವಲ ಒಂದು ದೇಶದ ಭದ್ರತೆಗೆ ಸವಾಲಲ್ಲ, ಬದಲಾಗಿ ಎಲ್ಲಾ ಮಾನವೀಯತೆಗೆ ಸಾಮಾನ್ಯ ಸವಾಲಾಗಿದೆ.
ಯಾವುದೇ ದೇಶ, ಯಾವುದೇ ಸಮಾಜ, ಯಾವುದೇ ನಾಗರಿಕರು ಅದರಿಂದ ಸುರಕ್ಷಿತರೆಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಏಕತೆಯನ್ನು ಒತ್ತಿ ಹೇಳಿದೆ. ಜಂಟಿ ಮಾಹಿತಿ ಕಾರ್ಯಾಚರಣೆಯನ್ನು ಮುನ್ನಡೆಸುವ ಮೂಲಕ ಅಲ್ ಖೈದಾ ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಹೋರಾಡಲು ಭಾರತ ಉಪಕ್ರಮವನ್ನು ತೆಗೆದುಕೊಂಡಿತು. ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ನಾವು ನಮ್ಮ ಧ್ವನಿ ಎತ್ತಿದ್ದೇವೆ. ಅದರಲ್ಲಿ ನಿಮ್ಮ ಬೆಂಬಲಕ್ಕಾಗಿ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದರು.