ಕೀವ್: ಭಾರತ ಸೇರಿದಂತೆ ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕಗಳನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬೆಂಬಲಿಸಿದ್ದು, ಈ ಕ್ರಮವನ್ನು 'ಸರಿಯಾದ ಕಲ್ಪನೆ' ಎಂದು ಕರೆದಿದ್ದಾರೆ.
ಅಮೆರಿಕನ್ ಪ್ರಸಾರಕ ಎಬಿಸಿಯೊಂದಿಗೆ ಮಾತನಾಡಿದ ಝೆಲೆನ್‌ಸ್ಕಿ, ಮಾಸ್ಕೋದ ಇಂಧನ ವ್ಯಾಪಾರವನ್ನು ಉಕ್ರೇನ್ ವಿರುದ್ಧದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಸ್ತ್ರ ಎಂದ ಅವರು, ಈ ಕೂಡಲೇ ಅಲ್ಲಿನ ರಫ್ತುಗಳನ್ನು ನಿಲ್ಲಿಸಬೇಕಾಗಿದೆ ಎಂದು ಹೇಳಿದರು.
'ರಷ್ಯಾ ಜೊತೆ ಒಪ್ಪಂದ ಮಾಡಿಕೊಳ್ಳುವುದನ್ನು ಮುಂದುವರಿಸುವ ದೇಶಗಳ ಮೇಲೆ ಸುಂಕ ವಿಧಿಸುವ ಆಲೋಚನೆ ಸರಿಯಾದ ಕಲ್ಪನೆ ಎಂದು ನಾನು ಭಾವಿಸುತ್ತೇನೆ' ಎಂದು ಇತ್ತೀಚೆಗೆ ಚೀನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವಿನ ಭೇಟಿ ಬಗ್ಗೆ ಕೇಳಿದಾಗ ಝೆಲೆನ್‌ಸ್ಕಿ ಹೇಳಿದರು.
ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ರಷ್ಟು ಮಾಡಿದ್ದಾರೆ. ಇದರಲ್ಲಿ ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದಕ್ಕೆ ಶೇ 25ರಷ್ಟು ಹೆಚ್ಚುವರಿ ಸುಂಕವೂ ಸೇರಿದೆ. ಆದಾಗ್ಯೂ, ಭಾರತವು ಅಮೆರಿಕದ ಕ್ರಮವನ್ನು 'ಅನ್ಯಾಯ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ' ಎಂದು ಕರೆದಿದೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ನವದೆಹಲಿ ನಿರಂತರವಾಗಿ ಕರೆಗಳನ್ನು ನೀಡುತ್ತಿದೆ.
ಮಾಸ್ಕೋ ಜೊತೆ ಇಂಧನ ವ್ಯಾಪಾರ ಮುಂದುವರೆಸಿದ್ದಕ್ಕಾಗಿ ಉಕ್ರೇನ್‌ನ ಯುರೋಪಿಯನ್ ಪಾಲುದಾರರ ಮೇಲೆಯೂ ಝೆಲೆನ್ಸ್ಕಿ ದಾಳಿ ನಡೆಸಿದರು. 'ಪುಟಿನ್ ಮೇಲೆ ಹೆಚ್ಚುವರಿ ಒತ್ತಡ ಬೇಕು ಎಂದು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಯುನೈಟೆಡ್ ಸ್ಟೇಟ್ಸ್‌ನಿಂದಲೂ ಒತ್ತಡ ಬೇಕು ಮತ್ತು ಯುರೋಪಿಯನ್ನರ ಬಗ್ಗೆ ಅಧ್ಯಕ್ಷ ಟ್ರಂಪ್ ಹೇಳಿದ್ದು ಸರಿ ಎಂದು ನಾನು ಭಾವಿಸುತ್ತೇನೆ. ನಾನು ಎಲ್ಲ ಪಾಲುದಾರರಿಗೆ ತುಂಬಾ ಕೃತಜ್ಞನಾಗಿದ್ದೇನೆ. ಆದರೆ, ಅವರಲ್ಲಿ ಕೆಲವರು ತೈಲ ಮತ್ತು ರಷ್ಯಾದ ಅನಿಲವನ್ನು ಖರೀದಿಸುತ್ತಲೇ ಇದ್ದಾರೆ ಮತ್ತು ಇದು ನ್ಯಾಯಯುತವಲ್ಲ... ಆದ್ದರಿಂದ ನಾವು ರಷ್ಯಾದಿಂದ ಯಾವುದೇ ರೀತಿಯ ಇಂಧನವನ್ನು ಖರೀದಿಸುವುದನ್ನು ನಿಲ್ಲಿಸಬೇಕು... ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳುವುದನ್ನು ಮುಂದುವರಿಸುವ ದೇಶಗಳ ಮೇಲೆ ಸುಂಕಗಳನ್ನು ವಿಧಿಸುವ ಆಲೋಚನೆ ಸರಿಯಾದ ಕಲ್ಪನೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
'ಕೊಲೆಗಾರನನ್ನು ತಡೆಯುವ ಒಂದೇ ಒಂದು ಮಾರ್ಗ ಇದು. ಅವನಿಂದ ನೀವು ಆಯುಧವನ್ನು ಕಸಿದುಕೊಳ್ಳಬೇಕು. ಅವನ ಶಕ್ತಿಯೇ ಅವನ ಬಳಿಯಿರುವ ಆಯುಧ' ಎಂದು ಹೇಳಿದರು.
ಇತ್ತೀಚೆಗೆ ಅಲಾಸ್ಕಾದಲ್ಲಿ ಟ್ರಂಪ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪುಟಿನ್ ಅವರಿಗೆ ಅಮೆರಿಕದಲ್ಲಿ ದೊರೆತ ಭವ್ಯ ಸ್ವಾಗತದ ಬಗ್ಗೆ ಕೇಳಿದಾಗ, 'ಉಕ್ರೇನ್ ಅಲ್ಲಿ ಇಲ್ಲದಿರುವುದು ವಿಷಾದಕರ'. ಪುಟಿನ್ ಅವರು ಬಯಸಿದ್ದನ್ನು ಟ್ರಂಪ್ ನೀಡಿದರು... ಅವರು ಅಮೆರಿಕ ಅಧ್ಯಕ್ಷರನ್ನು ಭೇಟಿಯಾಗಲು ಬಯಸಿದ್ದರು... ನಾನು ಅಮೆರಿಕದಲ್ಲಿದ್ದೇನೆ ಎಂಬುದನ್ನು ಎಲ್ಲರಿಗೂ ತೋರಿಸಲು ಪುಟಿನ್ ಬಯಸಿದ್ದರು ಎಂದು ಝೆಲೆನ್‌ಸ್ಕಿ ಹೇಳಿದರು.
'ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗಿನ ಮಾತುಕತೆಗೆ ಮಾಸ್ಕೋಗೆ ತೆರಳುವ ಆಹ್ವಾನವನ್ನು ತಿರಸ್ಕರಿಸಿದರು ಮತ್ತು ಅವರೇ (ಪುಟಿನ್) ಕೀವ್‌ಗೆ ಬರಬಹುದು... ನನ್ನ ದೇಶವು ಕ್ಷಿಪಣಿಗಳ ದಾಳಿಗೆ ಒಳಗಾಗುತ್ತಿರುವಾಗ ನಾನು ಮಾಸ್ಕೋಗೆ ಹೋಗಲು ಸಾಧ್ಯವಿಲ್ಲ' ಎಂದು ಹೇಳಿದರು.
ಕ್ರೆಮ್ಲಿನ್ ಉಕ್ರೇನ್ ಮೇಲೆ ತನ್ನ ಅತಿದೊಡ್ಡ ವೈಮಾನಿಕ ದಾಳಿಯನ್ನು ನಡೆಸಿದ ನಂತರ, ರಷ್ಯಾದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವುದಾಗಿ ಟ್ರಂಪ್ ಭಾನುವಾರ ಬೆದರಿಕೆ ಹಾಕುವುದಕ್ಕೂ ಮುನ್ನ ಝೆಲೆನ್‌ಸ್ಕಿ ಹೇಳಿಕೆ ನೀಡಿದರು.
ಆಗಸ್ಟ್ 15 ರಂದು ಟ್ರಂಪ್ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯು ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ಸಾಧಿಸಲು ವಿಫಲವಾದಾಗಿನಿಂದ ರಷ್ಯಾ ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿದೆ.