ಕಠ್ಮಂಡು: ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸಿದ್ದ ನೇಪಾಳ ಸರ್ಕಾರ ಕೊನೆಗೆ ಯುವ ಸಮೂಹದ ಭಾರಿ ಪ್ರತಿಭಟನೆ ಬಳಿಕ ಸೋಮವಾರ ರಾತ್ರಿ ತನ್ನ ನಿರ್ಧಾರವನ್ನು ವಾಪಸ್ ಪಡೆದಿದೆ.
ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಾಪಸ್ ಪಡೆಯಬೇಕು ಮತ್ತು ಭ್ರಷ್ಟಾಚಾರ ನಿಯಂತ್ರಿಸುವಂತೆ ಆಗ್ರಹಿಸಿ ಕಠ್ಮಂಡು ಸೇರಿದಂತೆ ನೇಪಾಳದ ವಿವಿಧೆಡೆ ಯುವಕರು ನಡೆಸಿದ ಬೃಹತ್ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿತ್ತು. ಈ ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಪ್ರಧಾನಿ ಕೆ ಪಿ ಶರ್ಮಾ ಓಲಿ ಅವರ ಸಮ್ಮಿಶ್ರ ಸರ್ಕಾರದ ಪಾಲುದಾರ ನೇಪಾಳಿ ಕಾಂಗ್ರೆಸ್‌ನ ಗೃಹ ಸಚಿವ ರಮೇಶ್ ಲೇಖಕ್ ರಾಜೀನಾಮೆ ನೀಡಿದ್ದಾರೆ. ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಕಠ್ಮಂಡುವಿನಲ್ಲಿ ನೇಪಾಳಿ ಸೇನೆಯನ್ನು ನಿಯೋಜಿಸಲಾಯಿತು, ನ್ಯೂ ಬನೇಶ್ವರ್‌ನಲ್ಲಿರುವ ಸಂಸತ್ತಿನ ಸಂಕೀರ್ಣದ ಸುತ್ತಲಿನ ರಸ್ತೆಗಳನ್ನು ಸೈನಿಕರು ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದಾಗಿ ನೇಪಾಳ ಸರ್ಕಾರ ಸೋಮವಾರ ತಡರಾತ್ರಿ ಘೋಷಿಸಿದೆ. ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ.