ವಾಷಿಂಗ್ಟನ್: ಭಾರತವು ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಹೆಚ್ಚಿನ ಸುಂಕ ಮತ್ತು ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ಸಾಧ್ಯ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ (Howard Lutnick) ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಅವರು ಪ್ರಸ್ತುತ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಲುಟ್ನಿಕ್ ಹೇಳಿದರು.
ಭಾರತ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಿದಾಗ, ನಾವು ಅವರೊಂದಿಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಹೇಳಿದರು. ಒಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ವಿಶೇಷ ಸ್ನೇಹಿತ ಎಂದು ಕರೆಯುತ್ತಿದ್ದರೆ, ಮತ್ತೊಂದೆಡೆ ಅವರ ಸಚಿವರು ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಹೊವಾರ್ಡ್ ಲುಟ್ನಿಕ್ ಭಾರತ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಸುಂಕ ಮತ್ತು ವ್ಯಾಪಾರ ಒಪ್ಪಂದದ ಕುರಿತು ಯಾವುದೇ ಮಾತುಕತೆ ಇರುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಹೊವಾರ್ಡ್ ಲುಟ್ನಿಕ್ ರಷ್ಯಾದ ತೈಲ ಖರೀದಿಸುವುದಕ್ಕಾಗಿ ಭಾರತವನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದಾರೆ. ಇತ್ತೀಚೆಗೆ, ಶೇಕಡಾ 50ರಷ್ಟು ಸುಂಕವನ್ನು ಎದುರಿಸುತ್ತಿರುವ ಭಾರತವು ಶೀಘ್ರದಲ್ಲೇ ಅಮೆರಿಕದ ಒತ್ತಡಕ್ಕೆ ಮಣಿಯುತ್ತದೆ ಎಂದು ಅವರು ಹೇಳಿದ್ದರು. ಕಳೆದ ವಾರ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಅವರು, "ಒಂದು ಅಥವಾ ಎರಡು ತಿಂಗಳಲ್ಲಿ ಭಾರತ ಮಾತುಕತೆಯ ಮೇಜಿನ ಬಳಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಭಾರತ ಕ್ಷಮೆಯಾಚಿಸುತ್ತದೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ನನ್ನ ಆತ್ಮೀಯ ಸ್ನೇಹಿತ ಎಂದು ಟ್ರಂಪ್ ಕರೆದ ನಂತರ ಲುಟ್ನಿಕ್ ಈ ಹೇಳಿಕೆ ನೀಡಿದ್ದರು. ಭಾರತ ಮತ್ತು ಅಮೆರಿಕ ವಿಶೇಷ ಸಂಬಂಧವನ್ನು ಹೊಂದಿವೆ. ಚಿಂತಿಸಲು ಏನೂ ಇಲ್ಲ ಎಂದು ಟ್ರಂಪ್ ಹೇಳಿದ್ದ ಕೆಲವು ಗಂಟೆಗಳ ನಂತರ, ಪ್ರಧಾನಿ ಮೋದಿ ಸಹ ಪ್ರತಿಕ್ರಿಯಿಸಿ ಅಧ್ಯಕ್ಷ ಟ್ರಂಪ್ ಅವರ ಭಾವನೆಗಳನ್ನು ಮೆಚ್ಚುತ್ತೇನೆ ಮತ್ತು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಹೇಳಿದ್ದರು.