ಕಠ್ಮಂಡು: ನೇಪಾಳದ ಪ್ರಧಾನಿ ಹಾಗೂ ಅಧ್ಯಕ್ಷರು ರಾಜೀನಾಮೆ ನೀಡಿದ ಬೆನ್ನಲ್ಲೇ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ದೇಶಾದ್ಯಂತ ನಡೆದ ವರ್ಚುವಲ್ ಸಭೆಯಲ್ಲಿ 5,000ಕ್ಕೂ ಹೆಚ್ಚು ಯುವಕರು ಅವರನ್ನು ಬೆಂಬಲಿಸಿದ ನಂತರ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಪಾಳದ ಮುಂದಿನ ಪ್ರಧಾನಿ ಹುದ್ದೆಗೆ ಪ್ರಮುಖ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
26 ಸಾಮಾಜಿಕ ಜಾಲತಾಣಗಳ ನಿಷೇಧ ಹಾಗೂ ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ ಬಿದಿಗೀಳಿದ ಜನಸಮೂಹ ಅದರಲ್ಲೂ ಯುವಕರು ಒಲಿ ನೇತೃತ್ವದ ಸರ್ಕಾರವನ್ನ ಕಿತ್ತು ಎಸೆದಿದ್ದರು. ನಂತರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸುಮಾರು 25 ಮಂದಿ ಸಾವನ್ನಪ್ಪಿ ನೂರಾರು ಜನ ಗಾಯಗೊಂಡಿದ್ದರು. ಅದಾದ ನಂತರ ನಡೆದ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೆ ಖಡ್ಗ ಪ್ರಸಾದ್ ಓಲಿ ರಾಜೀನಾಮೆ ನೀಡಿದ್ದರು.
ಇದಾದ ಬೆನ್ನಲ್ಲೇ ಇಂದು ವರ್ಚುವಲ್ ಸಭೆ ನಡೆಸಿದ 5,000 ಕ್ಕೂ ಹೆಚ್ಚು ಯುವಕರು, ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಆಯ್ಕೆ ಮಾಡಿದ್ದಾರೆ. ಆನ್‌ಲೈನ್ ಚರ್ಚೆಯು ಉನ್ನತ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಮೇಲೆ ಕೇಂದ್ರೀಕರಿಸಿತ್ತು. ಅದ್ರಂತೆ, ಕರ್ಕಿ ಹೆಸರನ್ನು ಪ್ರಸ್ತಾಪಿಸಿ ಕನಿಷ್ಠ 1,000 ಲಿಖಿತ ಸಹಿಗಳನ್ನು ಕೇಳಲಾಗಿತ್ತು ಎಂದು ವರದಿಯಾಗಿದೆ. ಆದ್ರೆ ಮೂಲಗಳ ಪ್ರಕಾರ, ಅವರು ಈ ಬೇಡಿಕೆಯನ್ನು ಮೀರಿ 2,500 ಕ್ಕೂ ಹೆಚ್ಚು ಸಹಿಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಜೆನ್-ಝಡ್ ಚಳವಳಿಯ ನಾಯಕರು ಇಂದು ಬೆಳಿಗ್ಗೆ ವರ್ಚುವಲ್ ಸಭೆಯನ್ನು ನಡೆಸಿದರು, ಅಲ್ಲಿ ಅವರು ಕಠ್ಮಂಡು ಮೇಯರ್ ಬಾಲೆನ್ ಶಾ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರಿಗೆ 15 ಪ್ರತಿನಿಧಿಗಳನ್ನು ಕಳುಹಿಸುವ ಬಗ್ಗೆ ಚರ್ಚಿಸಿದರು. ನಂತರ ಚಳುವಳಿಯು ಮುಂಬರುವ ಚರ್ಚೆಗಳಿಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿಯನ್ನು ತಮ್ಮ ಮಧ್ಯಂತರ ನಾಯಕಿಯಾಗಿ ನೇಮಿಸಲು ನಿರ್ಧರಿಸಿತು.
ಕಠ್ಮಂಡು ಮೇಯರ್ ಬಾಲೇಂದ್ರ ಶಾ ಮತ್ತು ಯುವ ನಾಯಕ ಸಾಗರ್ ಧಕಲ್ ಅವರ ಹೆಸರುಗಳು ಕೂಡ ಚರ್ಚೆಯಲ್ಲಿ ಬಂದವು, ಆದರೆ ಪ್ರತಿಭಟನಾ ನಿರತ ಯುವಕರು ಪ್ರಸ್ತುತ ಪರಿಸ್ಥಿತಿಯಲ್ಲಿ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ವ್ಯಕ್ತಿ ಎಂಬ ಇಮೇಜ್ ಹೊಂದಿರುವ ಕರ್ಕಿಯಂತಹ ವ್ಯಕ್ತಿತ್ವ ಮಾತ್ರ ಜನರ ವಿಶ್ವಾಸವನ್ನು ಗಳಿಸಬಹುದು ಎಂದು ನಂಬಿದ್ದರು.
ರಾಜಕೀಯ ಪಕ್ಷಗಳೊಂದಿಗೆ ಸಂಯೋಜಿತವಾಗಿರುವ ಯಾವುದೇ ಯುವಕರು ನಾಯಕತ್ವ ಮಾತುಕತೆಗಳಲ್ಲಿ ಭಾಗವಹಿಸಬಾರದು ಎಂದು ಗುಂಪು ಒತ್ತಿಹೇಳಿತು. ಪ್ರಸ್ತುತ ಯಾವುದೇ ಪಕ್ಷದೊಂದಿಗೆ ಸಂಬಂಧವಿಲ್ಲದ ಸುಶೀಲಾ ಕರ್ಕಿಯನ್ನು ಆಯ್ಕೆ ಮಾಡಲಾಯಿತು.
ಸುಶೀಲಾ ಕರ್ಕಿ ಜೂನ್ 7, 1952 ರಂದು ಬಿರಾಟ್‌ನಗರದಲ್ಲಿ ಜನಿಸಿದ ಅವರು, 1979ರಲ್ಲಿ ಬಿರಾಟ್‌ನಗರದಲ್ಲೇ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು. ಮುಂದೆ ಜನವರಿ 22, 2009ರಂದು ಸುಶೀಲಾ ಕರ್ಕಿ ಸುಪ್ರೀಂ ಕೋರ್ಟ್‌ನ ತಾತ್ಕಾಲಿಕ ನ್ಯಾಯಾಧೀಶೆಯಾಗಿ ನೇಮಕಗೊಂಡರು.
ಕೇವಲ ಒಂದು ವರ್ಷದಲ್ಲೇ, 2010ರಲ್ಲಿ ಅವರು ಶಾಶ್ವತ ನ್ಯಾಯಾಧೀಶೆಯಾದರು. ಇದರೊಂದಿಗೆ 2016ರಲ್ಲಿ ಅವರು ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆ ಎಂಬ ಐತಿಹಾಸಿಕ ಸಾಧನೆಯನ್ನು ಮಾಡಿದರು. ಹಾಗಾಗಿ, ಅವರು ಜುಲೈ 11, 2016ರಿಂದ ಜೂನ್ 7, 2017ರವರೆಗೆ ಅವರು ಸುಪ್ರೀಂ ಕೋರ್ಟ್‌ನ ಉನ್ನತ ಹುದ್ದೆಯನ್ನು ನಿರ್ವಹಿಸಿದರು. ಇದು ನೇಪಾಳದ ಇತಿಹಾಸದಲ್ಲಿ ಮಹಿಳಾ ಶಕ್ತಿಯ ಮಹತ್ವವನ್ನು ಪ್ರತಿಬಿಂಬಿಸಿದ ಕ್ಷಣವಾಗಿತ್ತು.
ಮುಂದುವರೆದು, ಮುಖ್ಯ ನ್ಯಾಯಾಧೀಶೆಯಾಗಿದ್ದಾಗ, ಅವರು ಹಲವಾರು ಮಹತ್ವದ ತೀರ್ಮಾನಗಳನ್ನು ಕೈಗೊಂಡರು. ಆದರೆ 2017ರಲ್ಲಿ ಮಾವೋವಾದಿ ಕೇಂದ್ರ ಮತ್ತು ನೇಪಾಳಿ ಕಾಂಗ್ರೆಸ್ ಅವರ ವಿರುದ್ಧ ಮಹಾಭಿಯೋಗ ನಿರ್ಣಯವನ್ನು ಮಂಡಿಸಿತು. ಈ ಕ್ರಮಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಸುಪ್ರೀಂ ಕೋರ್ಟ್ ತಕ್ಷಣವೇ ಸಂಸತ್ತನ್ನು ನಿಲ್ಲಿಸುವ ಆದೇಶ ನೀಡಿತು ಮತ್ತು ಅಂತಿಮವಾಗಿ ಆ ನಿರ್ಣಯವನ್ನು ಹಿಂತೆಗೆದುಕೊಳ್ಳಬೇಕಾಯಿತು