ಕಠ್ಮಂಡು: ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ Gen-Z ಪ್ರತಿಭಟನೆಯಿಂದಾಗಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಈ ಕುರಿತು ನೇಪಾಳದ ಆರೋಗ್ಯ ಸಚಿವಾಲಯ ಶುಕ್ರವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇವರಲ್ಲಿ 30 ವ್ಯಕ್ತಿಗಳು ಗುಂಡೇಟಿನಿಂದ ಸಾವನ್ನಪ್ಪಿದ್ದರೆ, 21 ಮಂದಿ ಸುಟ್ಟಗಾಯಗಳು ಮತ್ತಿತರ ಗಂಭೀರ ಗಾಯಗಳಿಂದ ಸಾವನ್ನಪ್ಪಿರುವುದಾಗಿ ಸಚಿವಾಲಯ ದೃಢಪಡಿಸಿದೆ.
ಮೃತರಲ್ಲಿ ಓರ್ವ ಭಾರತೀಯ ಪ್ರಜೆ, ಮೂವರು ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ ಎಂದು ನೇಪಾಳ ಪೊಲೀಸರ ಸಹ ವಕ್ತಾರ ರಮೇಶ್ ಥಾಪಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಒಟ್ಟು ಮೃತರ ಪೈಕಿ 36 ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಮಹಾರಾಜ್‌ಗಂಜ್‌ನಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಯಲ್ಲಿ ಇಂದು ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ G-Z ಪ್ರತಿಭಟನಾಕಾರರ ಮೃತದೇಹಗಳನ್ನು ಹಸ್ತಾಂತರ ಕಾರ್ಯವನ್ನು ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆ ಆರಂಭಿಸಿದೆ.
ಸೆಪ್ಟೆಂಬರ್ 8, 2025 ರಂದು ತೆರಿಗೆ ಆದಾಯ ಮತ್ತು ಸೈಬರ್ ಸುರಕ್ಷತೆಯ ಕಾರಣದಿಂದ ಸರ್ಕಾರ ಪ್ರಮುಖ ಸೋಶಿಯಲ್ ಮೀಡಿಯಾಗಳನ್ನು ನಿರ್ಬಂಧಿಸಿದ ನಂತರ ಕಠ್ಮಂಡು ಮತ್ತು ಪೋಖರಾ, ಬಟ್ವಾಲ್ ಮತ್ತು ಬಿರ್‌ಗುಂಜ್ ಮತ್ತಿತರ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ತೀವ್ರವಾಯಿತು. ಪರಿಸ್ಥಿತಿ ನಿಯಂತ್ರಿಸಲು ಕಠ್ಮಂಡು ಸೇರಿದಂತೆ ಹಲವು ನಗರಗಳಲ್ಲಿ ಇಂದು ಸಂಜೆಯವರೆಗೂ ಕರ್ಫ್ಯೂ ವಿಧಿಸಲಾಗಿತ್ತು. ಮತ್ತೆ ಸಂಜೆ 7 ರಿಂದ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಹೇರಲಾಗುವುದು ಎಂದು ನೇಪಾಳ ಸೇನೆಯ ಹೇಳಿಕೆ ತಿಳಿಸಿದೆ.
ಆಡಳಿತದಲ್ಲಿ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತವನ್ನು ಕೊನೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಸರ್ಕಾರವು ಹೆಚ್ಚು ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿರಬೇಕು ಎಂದು ಅವರು ಬಯಸುತ್ತಿದ್ದಾರೆ. ಈ ಮಧ್ಯೆ ಮಧ್ಯಂತರ ಸರ್ಕಾರ ಸ್ಥಾಪನೆಯ ಸಭೆ ನಡೆದಿದ್ದು, ಮಾಜಿ ಮುಖ್ಯ ನ್ಯಾಯಾಧೀಶೆ ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಶೀಘ್ರದಲ್ಲಿಯೇ ಅವರು ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಲಿಕೊಳ್ಳಲಿದ್ದಾರೆ ಎನ್ನಲಾಗಿದೆ.