ಖೈಬರ್ ಪಖ್ತುಂಖ್ವಾ: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಗೆ ಸೇರಿದ 35 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 12 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಈ ಕಾರ್ಯಾಚರಣೆಗಳನ್ನು ಕಳೆದ ನಾಲ್ಕು ದಿನದಿಂದ ನಡೆಸಲಾಗಿದೆ ಎಂದು ಮಿಲಿಟರಿಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್(ಐಎಸ್‌ಪಿಆರ್) ಶನಿವಾರ ತಿಳಿಸಿದೆ.
ಬಜೌರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆ ನಡೆಸಿದ್ದು, ತೀವ್ರ ಗುಂಡಿನ ಚಕಮಕಿಯಲ್ಲಿ, ಟಿಟಿಪಿಗೆ ಸೇರಿದ 22 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ.
ದಕ್ಷಿಣ ವಜೀರಿಸ್ತಾನ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ, 13 ಟಿಟಿಪಿ ಭಯೋತ್ಪಾದಕರನ್ನು ತಟಸ್ಥಗೊಳಿಸಲಾಯಿತು ಮತ್ತು ತೀವ್ರ ಗುಂಡಿನ ಚಕಮಕಿಯಲ್ಲಿ 12 ಸೈನಿಕರು ಪ್ರಾಣ ಕಳೆದುಕೊಂಡರು ಎಂದು ಐಎಸ್‌ಪಿಆರ್ ತಿಳಿಸಿದೆ.
ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಭಯೋತ್ಪಾದಕ ಕೃತ್ಯಗಳಲ್ಲಿ ಅಫಘಾನ್ ಪ್ರಜೆಗಳು ಭಾಗಿಯಾಗಿದ್ದಾರೆ ಎಂದು ಐಎಸ್‌ಪಿಆರ್ ಹೇಳಿಕೊಂಡಿದೆ.