ವಾಷಿಂಗ್ಟನ್: ಉಕ್ರೇನ್ ನಲ್ಲಿ ರಷ್ಯಾ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ಭಾರತ ಹಾಗೂ ಚೀನಾವನ್ನು ಗುರಾಣಿಯನ್ನಾಗಿಸಿಕೊಂಡಿರುವ ಅಮೆರಿಕ, ಇದೀಗ ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವಂತೆ ಅಮೆರಿಕ ಜಿ-7 (G7 )ರಾಷ್ಟ್ರಗಳನ್ನು ಒತ್ತಾಯಿಸಿದೆ.
ಶುಕ್ರವಾರ G7 ಹಣಕಾಸು ಮಂತ್ರಿಗಳೊಂದಿಗಿಗೆ ಮಾತನಾಡಿದ US ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮತ್ತು ವ್ಯವಹಾರದ ಪ್ರತಿನಿಧಿ(Trade Representative ) ಜೇಮಿಸನ್ ಗ್ರೀರ್, ಅಮೆರಿಕದ ಸುಂಕದ ಕ್ರಮಗಳನ್ನು ಅನುಸರಿಸಲು ಮಿತ್ರರಾಷ್ಟ್ರಗಳಿಗೆ ಒತ್ತಡ ಹೇರಿದರು. ರಷ್ಯಾದ ತೈಲ ಆದಾಯ ಕಡಿತಗೊಳಿಸುವ ಮೂಲಕ ಮಾತ್ರ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಹೇಳಿದ್ದಾರೆ.
'ಪುಟಿನ್ ಯುದ್ಧ ಯಂತ್ರದ ಆದಾಯ ಕಡಿತಗೊಳಿಸುವ ಏಕೀಕೃತ ಪ್ರಯತ್ನದಿಂದ ಮಾತ್ರ ನಾವು ಜನರ ಹತ್ಯೆಯನ್ನು ಕೊನೆಗೊಳಿಸಲು ಸಾಕಷ್ಟು ಆರ್ಥಿಕ ಒತ್ತಡ ಹೇರಲು ಸಾಧ್ಯವಾಗುತ್ತದೆ' ಎಂದು ಬೆಸೆಂಟ್ ಮತ್ತು ಗ್ರೀರ್ ಸಭೆಯ ನಂತರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆನಡಾದ ಹಣಕಾಸು ಸಚಿವ ಫ್ರಾನೊಯಿಸ್-ಫಿಲಿಪ್ ಷಾಂಪೇನ್ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಉಕ್ರೇನ್ ರಕ್ಷಣೆಗಾಗಿ ರಷ್ಯಾದ ಮೇಲೆ ಹೊಸ ನಿರ್ಬಂಧ, ವ್ಯಾಪಾರದ ಕ್ರಮಗಳು ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರಸ್ತುತ ಕೆನಡಾ G7 ಅಧ್ಯಕ್ಷ ಸ್ಥಾನವನ್ನು ಹೊಂದಿದ್ದು, ಉಕ್ರೇನ್‌ನ ದೀರ್ಘಕಾಲೀನ ಆರ್ಥಿಕ ಚೇತರಿಕೆ ಕಾಪಾಡಲು ಮಾಸ್ಕೋ ಮೇಲಿನ ಒತ್ತಡ ಬಿಗಿಗೊಳಿಸುವಲ್ಲಿ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಇವೆ ಎಂದು ಹೇಳಿದ್ದಾರೆ.
ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ನಿರಂತರವಾಗಿ ಖರೀದಿಸುತ್ತಿರುವುದು ಸಂಘರ್ಷವನ್ನು ಹೆಚ್ಚಿಸುತ್ತಿವೆ. ಆ ರಾಷ್ಟ್ರಗಳ ಮೇಲೆ ಅರ್ಥಪೂರ್ಣವಾಗಿ ಸುಂಕವನ್ನು ಹೇರಲಾಗಿದೆ ಎಂದು ಯುಎಸ್ ಖಜಾನೆ ವಕ್ತಾರ ಸಾರ್ವಜನಿಕವಾಗಿ ಹೇಳಿದ ಬೆನ್ನಲ್ಲೇ ಈ ಸಭೆ ನಡೆದಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಭಾರತೀಯ ಆಮದುಗಳ ಮೇಲಿನ ಹೆಚ್ಚುವರಿ ಸುಂಕವನ್ನು ಶೇ.25 ರಷ್ಟು ಹೆಚ್ಚಿಸಿದ್ದಾರೆ.
ಈ ಕ್ರಮವು ಯುಎಸ್-ಭಾರತ ಸಂಬಂಧಗಳನ್ನು ಹದಗೆಡಿಸಿದೆ. ಸಂಕೀರ್ಣವಾದ ವ್ಯಾಪಾರ ಮಾತುಕತೆಗಳನ್ನು ಉಂಟುಮಾಡಿದೆ. ಆದಾಗ್ಯೂ, ಚೀನಾದೊಂದಿಗೆ ಸೂಕ್ಷ್ಮವಾದ ವ್ಯಾಪಾರ ಒಪ್ಪಂದವನ್ನು ಸಂರಕ್ಷಿಸುವ ಅಗತ್ಯವನ್ನು ಉಲ್ಲೇಖಿಸಿ, ಟ್ರಂಪ್ ಚೀನಾದ ಆಮದುಗಳ ಮೇಲೆ ಹೊಸ ಸುಂಕಗಳನ್ನು ವಿಧಿಸುವುದರಿಂದ ದೂರವಿದ್ದಾರೆ.