ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುವ ಬಗ್ಗೆ ಭಾರತದ ವಿರುದ್ಧ ಸುಂಕದ ಬೆದರಿಕೆ ಹಾಗೂ ಪದೇ ಪದೇ ಕಿಡಿಕಾರುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿಗೆ ಮೃಧು ಧೋರಣೆ ತಾಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸ್ನೇಹವನ್ನು ಒತ್ತಿ ಹೇಳುತ್ತಿದ್ದಾರೆ.
ಪ್ರಧಾನಮಂತ್ರಿಯವರ ಜನ್ಮದಿನದ ಶುಭಾಶಯಗಳನ್ನು ಪೋಸ್ಟ್ ಮಾಡಿದ ಎರಡು ದಿನಗಳ ನಂತರ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಯುಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ಹಾಗೂ ಪ್ರಧಾನಿ ಮೋದಿ ಜೊತೆಗಿನ ಸುಮಧುರ ಬಾಂಧವ್ಯವನ್ನು ತಿಳಿಸಿದರು.
ನಾನು ಭಾರತ ಮತ್ತು ಪ್ರಧಾನಿಗೆ ತುಂಬಾ ಹತ್ತಿರವಾಗಿದ್ದೇನೆ. ನಾನು ಅವರೊಂದಿಗೆ ಮಾತನಾಡಿದ್ದು, ಹುಟ್ಟುಹಬ್ಬದ ಶುಭಾಶಯ ಕೋರಿದ್ದೇನೆ. ನಾವು ಉತ್ತಮ ಸಂಬಂಧವನ್ನು ಹೊಂದಿದ್ದೇವೆ" ಎಂದು ಟ್ರಂಪ್ ಹೇಳಿದರು.
ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಒತ್ತಾಯಕ್ಕೆ ಮತ್ತೊಂದು ಕಾರಣ ಬಹಿರಂಗ:
ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವುದಕ್ಕಾಗಿ ಯೂರೋಪಿಯನ್ ರಾಷ್ಟ್ರಗಳ ವಿರುದ್ಧ ವಾಗ್ದಾಳಿ ನಡೆಸುತ್ತಿರುವಂತೆಯೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ರಷ್ಯಾದಿಂದ ತೈಲ ವ್ಯಾಪಾರದ ಬಗ್ಗೆ ಪದೇ ಪದೇ ವಾಗ್ದಾಳಿಗಳ ಹೊರತಾಗಿಯೂ ಜಾಗತಿಕ ತೈಲ ಬೆಲೆಗಳನ್ನು ಕಡಿಮೆ ಮಾಡುವುದಕ್ಕೆ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದು ಕಂಡುಬಂದಿದ. ಆದರೆ ನಾನು ಹೋರಾಡುತ್ತಿರುವುದು ರಷ್ಯಾದಿಂದ ತೈಲ ಖರೀದಿಗೆ ಅಲ್ಲ. ಬದಲಾಗಿ ತೈಲ ಬೆಲೆ ಕಡಿಮೆಯಾದರೆ ರಷ್ಯಾ -ಉಕ್ರೇನ್ ಯುದ್ಧ ಕೊನೆಗೊಳ್ಳುತ್ತದೆ ಮತ್ತು ಮತ್ತು ಜಾಗತಿಕವಾಗಿ ತೈಲ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಿದರು.