ಪೇಶಾವರ: ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಪಖ್ತುಂಖ್ವಾದಲ್ಲಿ ಶುಕ್ರವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಅಫ್ಘಾನ್ ಪ್ರಜೆ ಸೇರಿದಂತೆ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ಇಲಾಖೆ (CTD) ತಿಳಿಸಿದೆ.
ಮೃತಪಟ್ಟ ಮೂವರು ಭಯೋತ್ಪಾದಕರ ಪೈಕಿ ಇಬ್ಬರು ಪೇಶಾವರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಸಾವಿಗೆ ಕಾರಣರಾಗಿದ್ದರು. ಗುಪ್ತಚರ-ಆಧಾರಿತ ಕಾರ್ಯಾಚರಣೆಯನ್ನು (IBO) ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಜಿಲ್ಲೆಯಲ್ಲಿ ನಡೆಸಲಾಯಿತು ಎಂದು ಇಲಾಖೆ ಮಾಹಿತಿ ನೀಡಿದೆ.
ಜಿಲ್ಲೆಯ ಅಲಿ ಮಸೀದಿ ಪ್ರದೇಶದಲ್ಲಿ ನಿಷೇಧಿತ ಉಗ್ರಗಾಮಿ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಕಮಾಂಡರ್ ಫಜಲ್ ನೂರ್ ಮತ್ತು ಆತನ ಗುಂಪಿನ ಸದಸ್ಯರು ಇರುವ ವರದಿ ಆಧರಿಸಿ ಸ್ಥಳಕ್ಕಾಗಮಿಸಿದ ತಂಡದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸುಮಾರು 30 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆದಿದೆ.
ಗುಂಡಿನ ದಾಳಿ ನಿಲ್ಲಿಸಿದ ನಂತರ ಶೋಧ ಕಾರ್ಯಾಚರಣೆ ಆರಂಭಿಸಿದ್ದು, SWAT ತಂಡವು ಮೂರು ಮೃತ ದೇಹಗಳನ್ನು ಪತ್ತೆ ಮಾಡಿದೆ ಎಂದು CTD ಹೇಳಿದೆ.