ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳು ಪ್ಯಾಲೆಸ್ಟೈನ್ ಅನ್ನು ರಾಷ್ಟ್ರವಾಗಿ ಔಪಚಾರಿಕವಾಗಿ ಗುರುತಿಸಿವೆ.
ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ವೀಡಿಯೊ ಹೇಳಿಕೆಯಲ್ಲಿ ಯುನೈಟೆಡ್ ಕಿಂಗ್‌ಡಮ್ ಪ್ಯಾಲೆಸ್ಟೈನ್ ರಾಜ್ಯವನ್ನು ಔಪಚಾರಿಕವಾಗಿ ಗುರುತಿಸುತ್ತಿದೆ ಎಂದು ಘೋಷಿಸಿದರು. ಈ ಕ್ರಮವನ್ನು ಶಾಂತಿ ಮತ್ತು ಎರಡು-ರಾಜ್ಯ ಪರಿಹಾರಕ್ಕಾಗಿ ಭರವಸೆಯನ್ನು ಪುನರುಜ್ಜೀವನಗೊಳಿಸುವತ್ತ ಒಂದು ಹೆಜ್ಜೆ ಎಂದು ಅವರು ವಿವರಿಸಿದರು.
ಇನ್ನು ಕೆನಡಾ ದೇಶ ಕೂಡ ದಿನದ ಆರಂಭದಲ್ಲಿ ರಾಜತಾಂತ್ರಿಕ ಕ್ರಮವನ್ನು ಮುನ್ನಡೆಸಿದ್ದು, ಪ್ಯಾಲೆಸ್ಟೈನ್ ರಾಷ್ಟ್ರವನ್ನು ಔಪಚಾರಿಕವಾಗಿ ಗುರುತಿಸಿದ ಮೊದಲ G7 ರಾಷ್ಟ್ರವಾಯಿತು. ಪ್ರಧಾನಿ ಮಾರ್ಕ್ ಕಾರ್ನಿ ತಮ್ಮ ದೇಶದ ಶಾಂತಿಗೆ ಬದ್ಧತೆಯನ್ನು ಒತ್ತಿ ಹೇಳಿದರು, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ಎರಡಕ್ಕೂ ಶಾಂತಿಯುತ ಭವಿಷ್ಯವನ್ನು ನಿರ್ಮಿಸುವಲ್ಲಿ ಕೆನಡಾ ತನ್ನ ಪಾಲುದಾರಿಕೆಯನ್ನು ನೀಡುತ್ತಿದೆ ಎಂದು ಅವರು ಘೋಷಣೆ ಮಾಡಿದರು.
ಪ್ಯಾಲೆಸ್ಟೈನ್ ಹಿಂಸಾಚಾರವನ್ನು ತಿರಸ್ಕರಿಸುವುದು ಮತ್ತು ಶಾಂತಿಯುತ ಸಹಬಾಳ್ವೆಗೆ ಅದರ ಬೆಂಬಲವು ನಿರ್ಧಾರದ ಕೇಂದ್ರಬಿಂದುವಾಗಿದೆ ಎಂದು ಕೆನಡಾದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಇತ್ತ ಆಸ್ಟ್ರೇಲಿಯಾ ಕೂಡ ಯುಕೆ ಮತ್ತು ಕೆನಡಾ ದೇಶಗಳನ್ನು ಅನುಸರಿಸಿದ್ದು, ಆಸಿಸ್ ಸರ್ಕಾರ ಕೂಡ ಪ್ಯಾಲೆಸ್ತೀನ್ ರಾಷ್ಟ್ರಕ್ಕೆ ಔಪಚಾರಿಕ ಮಾನ್ಯತೆ ನೀಡಿರುವುದಾಗಿ ಹೇಳಿದೆ. ಆಸಿಸ್ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ವಿದೇಶಾಂಗ ಸಚಿವ ಪೆನ್ನಿ ವಾಂಗ್ ಜಂಟಿ ಹೇಳಿಕೆಯನ್ನು ನೀಡಿ ಪ್ಯಾಲೆಸ್ಟೈನ್ ಅನ್ನು "ಸ್ವತಂತ್ರ ಮತ್ತು ಸಾರ್ವಭೌಮ" ರಾಷ್ಟ್ರವೆಂದು ಗುರುತಿಸುವುದನ್ನು ದೃಢಪಡಿಸಿದರು.
ಗಾಜಾದಲ್ಲಿ ಕದನ ವಿರಾಮ ಮತ್ತು ಅಕ್ಟೋಬರ್ 7, 2023 ರ ದಾಳಿಯ ಸಮಯದಲ್ಲಿ ಸೆರೆಹಿಡಿಯಲಾದ ಒತ್ತೆಯಾಳುಗಳ ಬಿಡುಗಡೆಯೊಂದಿಗೆ ಪ್ರಾರಂಭಿಸಿ, ಶಾಂತಿಗಾಗಿ ಆವೇಗವನ್ನು ಪುನರುಜ್ಜೀವನಗೊಳಿಸುವ ವಿಶಾಲ ಅಂತರರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಅವರು ಈ ಕ್ರಮವನ್ನು ರೂಪಿಸಿದರು.
ಎಲ್ಲರ ಚಿತ್ತ ವಿಶ್ವಸಂಸ್ಥೆಯತ್ತ
ಇನ್ನು ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ಪ್ಯಾಲೆಸ್ತೀನ್ ಗೆ ರಾಷ್ಟ್ರದ ಮಾನ್ಯತೆ ನೀಡುವಿಕೆಗೆ ಔಪಚಾರಿಕ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ವಿಶ್ವಸಂಸ್ಥೆಯತ್ತ ನೆಟ್ಟಿದೆ. ಮುಂಬರುವ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಸಮಯದಲ್ಲಿ ಬೆಲ್ಜಿಯಂ ಮತ್ತು ಇತರ ರಾಷ್ಟ್ರಗಳ ಜೊತೆಗೆ ಫ್ರಾನ್ಸ್ ಕೂಡ ಪ್ಯಾಲೆಸ್ತೀನ್ ಗೆ ಮಾನ್ಯತೆ ನೀಡುವ ನಿರೀಕ್ಷೆಯಿದೆ.
ಹೆಚ್ಚಾಗಿ ಸಾಂಕೇತಿಕವಾಗಿದ್ದರೂ, ಈ ಮಾನ್ಯತೆಗಳು ಜಾಗತಿಕ ರಾಜತಾಂತ್ರಿಕತೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತವೆ ಮತ್ತು ಉಗ್ರಗಾಮಿ ಬಣಗಳನ್ನು ಪ್ರತ್ಯೇಕಿಸುವ ಮತ್ತು ಪ್ಯಾಲೆಸ್ಟೀನಿಯನ್ ನಾಯಕತ್ವದೊಳಗೆ ಶಾಂತಿಯುತ ನಾಯಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ ಎನ್ನಲಾಗಿದೆ.