ವಾಷಿಂಗ್ಟನ್: ಗಾಜಾ ಸಂಘರ್ಷ ಕೊನೆಗೊಳಿಸುವ ಕಾಲ ಸನ್ನಿಹಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದ ಸೌತ್ ಲಾನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ನಾವು ಗಾಜಾದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ ತೋರುತ್ತಿದೆ. ಇದು ಒತ್ತೆಯಾಳುಗಳನ್ನು ಮರಳಿ ಪಡೆಯುವ ಒಪ್ಪಂದ ಅಂತಾ ಭಾವಿಸುತ್ತೇನೆ. ಇದು ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವಾಗಿದೆ" ಎಂದು ಹೇಳಿದರು.
ಈ ವಾರದ ಆರಂಭದಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ಭಾಗವಾಗಿ ಅರಬ್ ನಾಯಕರೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್, ಗಾಜಾ ಯುದ್ಧವನ್ನು ಕೊನೆಗೊಳಿಸಲು 21 ಅಂಶಗಳ ಉಪ ಕ್ರಮಗಳನ್ನು ಬಹಿರಂಗಪಡಿಸಿದ್ದರು.
ಈ ಮಧ್ಯೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾದಲ್ಲಿ ಹಮಾಸ್ ನಿರ್ಮೂಲನೆ ಮಾಡುವ ಇಸ್ರೇಲ್‌ನ ನಿರ್ಣಯವನ್ನು ಪುನರುಚ್ಚರಿಸಿದ್ದಾರೆ. ಇಸ್ರೇಲ್ ಕೆಲಸ ಇನ್ನೂ ಮುಗಿದಿಲ್ಲ. ಗಾಜಾ ನಗರದಿಂದ ಉಗ್ರಗಾಮಿ ಗುಂಪನ್ನು ಬೇರುಸಹಿತ ಕಿತ್ತೊಗೆಯುವ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೆತನ್ಯಾಹು ಮಾಡಿರುವ ಭಾಷಣ, ಅಮೆರಿಕ ಬೆಂಬಲದೊಂದಿಗೆ ಕತಾರ್ ಮಧ್ಯಸ್ಥಿಕೆಯೊಂದಿಗೆ ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ಸಂಭಾವ್ಯ ಒಪ್ಪಂದ ಕುರಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಶಾವಾದಕ್ಕೆ ವ್ಯತಿರಿಕ್ತವಾಗಿದೆ.