ಲೆಬನಾನ್ ಮೇಲಿನ ದಾಳಿ ಹಿನ್ನೆಲೆ ಅಮೆರಿಕಾ ವಿರುದ್ಧ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾತುಕತೆ ಆರಂಭಕ್ಕೂ ಮುನ್ನವೇ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದೆ.
ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಉದ್ವಿಗ್ನಗೊಳ್ಳುವಂತೆ ಮಾಡಿದ್ದು, ಇತ್ತೀಚೆಗೆ ಚರ್ಚೆಯಲ್ಲಿದ್ದ ಕದನ ವಿರಾಮದ ಭವಿಷ್ಯವೇ ಅನುಮಾನಾಸ್ಪದ ಎಂಬಂತೆ ತೋರುತ್ತಿದೆ.
ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಪ್ರತಿಕ್ರಿಯಿ, ಅಮೆರಿಕಾ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.ಟೆಹ್ರಾನ್ ಮುಂದಿಟ್ಟಿದ್ದ 10 ಅಂಶಗಳ ಶಾಂತಿ ಒಪ್ಪಂದಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿದ್ದಾರೆ.
ಅಮೆರಿಕಾದ ಮೇಲೆ ಇತಿಹಾಸದಿಂದಲೇ ಅವಿಶ್ವಾಸವಿದೆ ಎಂದು ಘಾಲಿಬಾಫ್ ಹೇಳಿದ್ದು, ಒಪ್ಪಂದಗಳನ್ನು ಪಾಲಿಸದ ಮಾದರಿ ಮತ್ತೆ ಮರುಕಳಿಸಿದೆ ಎಂದು ಕಿಡಿಕಾರಿದ್ದಾರೆ.
ಲೆಬನಾನ್ ಮೇಲೆ ಮುಂದುವರಿದ ದಾಳಿ, ಇರಾನ್ ವಾಯುಪ್ರದೇಶಕ್ಕೆ ಡ್ರೋನ್ ಪ್ರವೇಶ ಮತ್ತು ಯುರೇನಿಯಂ ಪುಷ್ಟೀಕರಣ ಹಕ್ಕಿನ ನಿರಾಕರಣೆ ಪ್ರಮುಖ ಉಲ್ಲಂಘನೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ದ್ವಿಪಕ್ಷೀಯ ಕದನ ವಿರಾಮ ಅಥವಾ ಸಂಧಾನ ಪ್ರಯತ್ನ ಅರ್ಥವಿಲ್ಲದ ಕ್ರಮ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕಾದ ಇತಿಹಾಸವೇ ವಚನ ಭ್ರಷ್ಟತೆಯಿಂದ ಕೂಡಿದೆ. ಮಾತುಕತೆ ಅಥವಾ ದ್ವಿಪಕ್ಷೀಯ ಕದನ ವಿರಾಮದ ಬಗ್ಗೆ ಮಾತನಾಡುವುದು ಇನ್ನು ಅಸಂಬದ್ಧ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಏಪ್ರಿಲ್ 10 ರಂದು (ಶುಕ್ರವಾರ) ನಡೆಯಬೇಕಿದ್ದ ನೇರ ಮಾತುಕತೆಯಲ್ಲಿ ಘಾಲಿಬಾಫ್ ಇರಾನ್ ನಿಯೋಗವನ್ನು ಮುನ್ನಡೆಸಬೇಕಿತ್ತು. ಆದರೆ, ಈ ಬೆಳವಣಿಗೆಯಿಂದಾಗಿ ಮಾತುಕತೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಇದೇ ವೇಳೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಲೆಬನಾನ್‌ನ ಯುದ್ಧ ಅಂತ್ಯ ಕೂಡ ಈ ಒಪ್ಪಂದದ ಭಾಗವಾಗಿರಬೇಕು ಎಂದು ಒತ್ತಾಯಿಸಿದ್ದರು. ಆದರೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲೆಬನಾನ್ ಈ ಕದನ ವಿರಾಮದ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಹೇಳಿರುವುದು ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಈ ನಡುವೆ ಲೆಬನಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಜಗತ್ತು ಗಮನಿಸುತ್ತಿದೆ ಎಂದು ಇರಾನ್ ಹೇಳಿದ್ದು, ಈಗ ಅಮೆರಿಕಾದ ನಡೆಯ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿದೆ ಎಂದು ಎಚ್ಚರಿಸಿದೆ.
ಈ ಬೆಳವಣಿಗೆಗಳ ನಡುವೆಯೇ ಇರಾನ್, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳ ಸಂಚಾರವನ್ನು ಮತ್ತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಜಾಗತಿಕ ತೈಲ ಸರಬರಾಜು ಹಾಗೂ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದರ ಜೊತೆಗೆ ಚೀನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇರಾನ್ ರಾಯಭಾರಿ ಅಬ್ದುಲ್ರೆಜಾ ರಹಮಾನಿ ಫಜ್ಲಿ, ಅಮೆರಿಕಾ-ಇರಾನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹಾಗೂ ದೀರ್ಘಕಾಲಿಕ ಭದ್ರತೆಗೆ ಚೀನಾ ಮತ್ತು ಸಂಯುಕ್ತ ರಾಷ್ಟ್ರಗಳ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ಪ್ರತಿನಿಧಿ ಮಾವ್ ನಿಂಗ್, ಎಲ್ಲಾ ರಾಷ್ಟ್ರಗಳು ಸಂವಾದದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಕದನ ವಿರಾಮದ ಸುತ್ತಲಿನ ಪರಸ್ಪರ ಆರೋಪ-ಪ್ರತ್ಯಾರೋಪಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಮುಂದಿನ ಬೆಳವಣಿಗೆಗಳು ಜಾಗತಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.