ವಾಷಿಂಗ್ಟನ್: ನನ್ನ ಅತ್ತೆ-ಮಾವ ಎಂದಿಗೂ ಭಾರತದ ಪರವಾಗಿ ನಿಲ್ಲುವಂತೆ ಒತ್ತಡ ಹೇರಿಲ್ಲ, ನನಗೆ ವೈಯಕ್ತಿಕ ಸಂಬಂಧಗಳಿಗಿಂತ ದೇಶದ ಹಿತಾಸಕ್ತಿಯೇ ಮುಖ್ಯ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ.ವ್ಯಾನ್ಸ್ ಅವರು ಹೇಳಿದ್ದಾರೆ.
ಅಮೇರಿಕಾದಲ್ಲಿ H-1B ವೀಸಾಗಳಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಜೆಡಿ ವ್ಯಾನ್ಸ್ ಈ ಹೇಳಿಕೆ ನೀಡಿದ್ದಾರೆ.
ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರು ವಲಸೆ ನೀತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಭಾರತೀಯ ವಲಸಿಗರ ಮಗಳನ್ನು ವಿವಾಹವಾಗಿದ್ದೇನೆ. ನನ್ನ ಅತ್ತೆ-ಮಾವ ಅತ್ಯಂತ ಶ್ರೇಷ್ಠ ವ್ಯಕ್ತಿಗಳು ಹಾಗೂ ಅವರು ಅಮೇರಿಕಾ ದೇಶದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಕೊಂಡಾಡಿದರು.
ಇದೇ ವೇಳೆ ಅಮೆರಿಕಾದ ಪೌರತ್ವ ಪಡೆದ ಮೇಲೆ ಈ ದೇಶದ ಹಿತಾಸಕ್ತಿಗೇ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದೂ ತಿಳಿಸಿದರು.
ವಲಸೆ ಬಂದವರು ಆ ದೇಶದ ಹಿತಾಸಕ್ತಿಗೆ ಒಗ್ಗಿಕೊಳ್ಳಬೇಕು. ನನ್ನ ಅತ್ತೆ-ಮಾವ ಭಾರತದಿಂದ ಅಮೇರಿಕಾಕ್ಕೆ ವಲಸೆ ಬಂದವರು. ಅಮೇರಿಕಾಕ್ಕೆ ಬಂದ ಮೇಲೆ ಅಪ್ಪಟ ಅಮೇರಿಕನ್ ಪ್ರಜೆಗಳಾಗಿ ಬದುಕುತ್ತಿದ್ದಾರೆ. ಆದರೆ, ಅವರು ಎಂದಿಗೂ ನನ್ನ ಬಳಿ ಬಂದು 'ನೀವು ಭಾರತದ ಹಿತಾಸಕ್ತಿಗಾಗಿ ಈ ಕೆಲಸ ಮಾಡಬೇಕು' ಅಥವಾ 'ಭಾರತದ ಪರವಾಗಿ ನಡೆದುಕೊಳ್ಳಬೇಕು. ಭಾರತದ ಪರವಾಗಿ ಲಾಬಿ (Lobby) ಮಾಡುವಂತೆ ಕೇಳಿಲ್ಲ ಎಂದು ಹೇಳಿದರು.
ಇದೇ ವೇಳೆ ವಲಸಿಗರನ್ನು ಗೌರವಿಸುತ್ತಲೇ, ಜೆಡಿ ವ್ಯಾನ್ಸ್ ಅವರು ಅಮೇರಿಕಾದ ವಲಸೆ ನೀತಿಯಲ್ಲಿನ ಅಕ್ರಮಗಳನ್ನೂ ಟೀಕಿಸಿದರು,
ಹೆಚ್-1 ಬಿ ವೀಸಾ ವ್ಯವಸ್ಥೆಯಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತಿವೆ ಎಂದು ಒಪ್ಪಿಕೊಂಡ ಅವರು, ಅದೇ ಸಮಯದಲ್ಲಿ ವಲಸಿಗರು ಅಮೆರಿಕದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆಂದು ಹೇಳಿದರು.
H-1B visa ಮೂಲಕ ಅಮೆರಿಕಾಕ್ಕೆ ಬಂದ ಅನೇಕ ಪ್ರತಿಭಾವಂತರು ದೇಶದ ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು. ಬಳಿಕ ತಮ್ಮ ವೈಯಕ್ತಿಕ ಜೀವನವನ್ನು ಉದಾಹರಣೆಯಾಗಿ ನೀಡಿ, ಅತ್ತೆ-ಮಾವಂದಿರನ್ನು ಕೊಂಡಾಡಿದರು.
ಅಮೆರಿಕದ ನಾಗರಿಕರಾದ ನಂತರ, ಯಾರೇ ಆಗಿರಲಿ ತಮ್ಮ ಮೂಲ ದೇಶಕ್ಕಿಂತ ಅಮೆರಿಕದ ಹಿತಾಸಕ್ತಿಯನ್ನು ಮೊದಲಿಗೆ ಪರಿಗಣಿಸಬೇಕು. ನೀವು ಯಾವ ದೇಶದಿಂದ ಬಂದಿದ್ದರೂ, ಅಮೆರಿಕದ ನಾಗರಿಕರಾದ ಬಳಿಕ ನೀವು ಮೊದಲಿಗೆ ಈ ದೇಶದ ಹಿತಾಸಕ್ತಿಯನ್ನೇ ಗಮನಿಸಬೇಕು. ಅದೇ ನಿಜವಾದ ಅಮೆರಿಕನ್ನಾಗುವ ಅರ್ಥ ಎಂದು ಹೇಳಿದರು.
ಬಳಿಕ ವಾನ್ಸ್ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದ ಒಂದು ಘಟನೆಯನ್ನು ಸ್ಮರಿಸಿದರು. ಉಕ್ರೇನಿಯನ್ ಮೂಲದ ಅಮೆರಿಕನ್ ವ್ಯಕ್ತಿಯೊಬ್ಬರು ಉಕ್ರೇನ್‌ಗೆ ಬೆಂಬಲ ನೀಡಬೇಕು ಎಂದು ಕೇಳಿದಾಗ, “ನೀವೀಗ ಅಮೆರಿಕದ ನಾಗರಿಕರು, ಆದ್ದರಿಂದ ಅಮೆರಿಕದ ಹಿತಾಸಕ್ತಿಯನ್ನೇ ಮೊದಲು ನೋಡಬೇಕು” ಎಂದು ಹೇಳಿದ್ದಾಗಿ ವಿವರಿಸಿದರು.
ಇದೇ ವೇಳೆ, ತನ್ನ ಭಾರತೀಯ ಮಾವಂದಿರ ಉದಾಹರಣೆಯನ್ನು ನೀಡುತ್ತಾ, ಅವರು ಯಾವಾಗಲೂ ಅಮೆರಿಕದ ಹಿತವನ್ನೇ ಬಯಸಿದ್ದರು ಎಂದು ಹೇಳಿದರು.
“ಅಮೆರಿಕನ್ ಆಗಿರುವುದು ಎಂದರೆ ‘America First’ ಎಂದು ಅರ್ಥ”. ಇದೇ ಮನೋಭಾವದಿಂದಲೇ ಜನರು ವಲಸೆ ನೀತಿಗಳನ್ನು ಹೆಚ್ಚು ಸ್ವೀಕರಿಸಲು ಸಿದ್ಧರಾಗುತ್ತಾರೆ ಎಂದು ಹೇಳಿದರು.