ವಾಷಿಂಗ್ಟನ್: ಇಸ್ಲಾಮಿಕ್ ರಾಷ್ಟ್ರದ ಬಂದರುಗಳ ಮೇಲೆ ಅಮೆರಿಕದ ನೌಕಾ ದಿಗ್ಬಂಧನಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಹಾರ್ಮುಜ್ ಜಲಸಂಧಿಯ ದಿಗ್ಬಂಧನವನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮಧ್ಯ ಪ್ರಾಚ್ಯ ರಾಷ್ಟ್ರಕ್ಕೆ ಮತ್ತೊಂದು ಬೆದರಿಕೆ ಹಾಕಿದ್ದಾರೆ.
ಇರಾನ್ ಜೊತೆಗೆ ಎರಡನೇ ಸುತ್ತಿನ ಶಾಂತಿ ಒಪ್ಪಂದದ ಮಾತುಕತೆಗಳು ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಇದನ್ನು ಅಮೆರಿಕ ಒಪ್ಪಿಕೊಂಡಿದೆ.
ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಸೇರಿದಂತೆ ಅಮೆರಿಕದ ಪ್ರತಿನಿಧಿಗಳು ಇರಾನ್ ಜೊತೆ ಕದನ ವಿರಾಮ ಮಾತುಕತೆ ನಡೆಸಲು ಸೋಮವಾರ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಮೂಲಕ ಇರಾನ್ ಮತ್ತು ಅಮೆರಿಕದ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂಬುದನ್ನು ಸ್ವತಃ ಡೊನಾಲ್ಡ್ ಟ್ರಂಪ್ ಅವರೇ ದೃಢಪಡಿಸಿದಂತಾಗಿದೆ.
ನಮ್ಮವ್ರು ಬರ್ತಾರೆ..
ಈ ಕುರಿತು ಟ್ರುಥ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಇರಾನ್ ಎರಡನೇ ಸುತ್ತಿನ ಮಾತುಕತೆಗಳಲ್ಲಿ ಒಪ್ಪಂದ ಮಾಡಿಕೊಳ್ಳದಿದ್ದರೆ ಅದರ ಇಂಧನ ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ಮಾಡಲಾಗುವುದು. ಒಪ್ಪಂದ ಮಾಡಿಕೊಳ್ಳಲು ಇರಾನ್ಗೆ ಇದು ಕೊನೆಯ ಅವಕಾಶ. ಇರಾನ್ ಈ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಇಡೀ ದೇಶವೇ ಸ್ಫೋಟಗೊಳ್ಳುವಂತೆ ಮಾಡುವೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮಾಡಿದ ತಪ್ಪನ್ನು ನಾನು ಮಾಡುವುದಿಲ್ಲ ಎಂದು ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.
ಕೊನೆಯ ಅವಕಾಶ
ನನ್ನ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಇಸ್ಲಾಮಾಬಾದ್‌ಗೆ ಸೋಮವಾರ ಕಳುಹಿಸುತ್ತಿದ್ದೇನೆ. ಇರಾನ್ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಒಪ್ಪಂದ ಮಾಡಿಕೊಳ್ಳುವುದು ಹೇಗೆ ಎಂಬುದೂ ಅವರಿಗೆ ಗೊತ್ತಿದೆ. ಇದು ನಾವು ರಾಜತಾಂತ್ರಿಕತೆಗೆ ನೀಡುತ್ತಿರುವ ಕೊನೆಯ ಅವಕಾಶ. ಇರಾನ್ ಈಗಾಗಲೇ ಹೆಚ್ಚಿನ ಅಂಶಗಳನ್ನು ಒಪ್ಪಿಕೊಂಡಿದ್ದಾರೆ. ಆ ದೇಶ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಈಗ ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಮಾತ್ರ ಒಪ್ಪಬೇಕು ಎಂದು ಟ್ರಂಪ್ ಹೇಳಿದ್ದಾರೆ.
ಟ್ರುಥ್ನಲ್ಲಿ ಹಂಚಿಕೊಂಡು ಮತ್ತೊಂದು ಪೋಸ್ಟ್ನಲ್ಲಿ ಇರಾನ್ ಕದನ ವಿರಾಮ ಉಲ್ಲಂಘಿಸಿದೆ. ಶನಿವಾರ ಹಾರ್ಮುಜ್ ಜಲಸಂಧಿಯಲ್ಲಿ ನೌಕೆಗಳ ಮೇಲೆ ಗುಂಡು ಹಾರಿಸಿದೆ. ಇದು ಕದನ ವಿರಾಮ ಒಪ್ಪಂದದ ಸಂಪೂರ್ಣ ಉಲ್ಲಂಘನೆ. ಹೋರ್ಮುಜ್ ಜಲಸಂಧಿ ದಿಗ್ಬಂಧನದಿಂದ ಅಮೆರಿಕ ಏನನ್ನೂ ಕಳೆದುಕೊಳ್ಳುವುದಿಲ್ಲ. ಇರಾನ್ ಸೋಲಿನ ಅಂಚಿನಲ್ಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ಗೆ ನ್ಯಾಯಯುತ ಮತ್ತು ಅದಕ್ಕೆ ಪರವಾದ ಒಪ್ಪಂದದ ಅಂಶಗಳನ್ನು ನೀಡಲಾಗಿದೆ. ಇದನ್ನೂ ಅವರು ಒಪ್ಪದಿದ್ದರೆ ಇನ್ನು ಮುಂದೆ ನಾನು ಒಳ್ಳೆಯವನಾಗಿ ಉಳಿಯುವುದಿಲ್ಲ. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳನ್ನು ಹೊಡೆದು ಹಾಕುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ಮುಂದೆ Mr Nice Guy ಇರೊಲ್ಲ.. ಕಿಲ್ಲಿಂಗ್ ಮಷಿನ್ ಕೊನೆಗೊಳಿಸುತ್ತೇವೆ
ನಾವು ನ್ಯಾಯಯುತ, ಸಮಂಜಸವಾದ ಒಪ್ಪಂದ ಮಾಡಲಿದ್ದೇವೆ. ಒಪ್ಪಂದಗಳಿಗೆ ಇರಾನ್ ಒಪ್ಪಲಿದೆ ಎಂದು ಭಾವಿಸಿದ್ದೇನೆ. ಒಂದು ವೇಳೆ ಒಪ್ಪದಿದ್ದರೆ ಇನ್ನು ಮುಂದೆ ಒಳ್ಳೆಯವನಾಗಿರಲು ಸಾಧ್ಯವಿಲ್ಲ. `ಇರಾನ್ ಕಿಲ್ಲಿಂಗ್ ಮಷೀನ್’ ಅನ್ನು ಅಂತ್ಯಗೊಳಿಸುತ್ತೇವೆ. ಇರಾನ್‌ನಲ್ಲಿರುವ ಎಲ್ಲ ವಿದ್ಯುತ್ ಸ್ಥಾವರ, ಎಲ್ಲ ಸೇತುವೆಗಳನ್ನು ನಾಶಪಡಿಸುತ್ತೇವೆ. ಕಳೆದ 47 ವರ್ಷಗಳಿಂದ ಇರಾನ್ ವಿರುದ್ಧ ಈ ಹಿಂದಿನ ಅಧ್ಯಕ್ಷರು ಏನು ಮಾಡಬೇಕಿತ್ತೋ ಅದನ್ನ ನಾವು ಈಗ ಮಾಡುತ್ತೇವೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಜಲಸಂಧಿ ಮುಚ್ಚಿದ್ರೆ ನಿಮಗೇ ನಷ್ಟ
ಅಂತೆಯೇ ಹಾರ್ಮುಜ್ ಜಲಸಂಧಿ ವಿವಾದದ ಕುರಿತು ಮಾತನಾಡಿರುವ ಟ್ರಂಪ್, ಹಾರ್ಮುಜ್ ನಲ್ಲಿ ಇರಾನ್ ಹಲವು ಫ್ರೆಂಚ್ ಹಡಗು ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಸರಕು ಸಾಗಣೆ ಹಡಗಿನ ಮೇಲೆ ದಾಳಿ ಮಾಡಿದೆ. ಇರಾನ್ ಇತ್ತೀಚೆಗೆ ಜಲಸಂಧಿಯನ್ನು ಮುಚ್ಚುತ್ತಿರುವುದಾಗಿ ಘೋಷಿಸಿತು, ಇದು ವಿಚಿತ್ರವಾಗಿದೆ, ಏಕೆಂದರೆ ನಮ್ಮ BLOCKADE ಈಗಾಗಲೇ ಅದನ್ನು ಮುಚ್ಚಿದೆ.
ಅವರು ತಿಳಿಯದೆ ನಮಗೆ ಸಹಾಯ ಮಾಡುತ್ತಿದ್ದಾರೆ, ಮತ್ತು ಮುಚ್ಚಿದ ಮಾರ್ಗದಿಂದ ಅವರು ದಿನಕ್ಕೆ $500 ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುತ್ತಾರೆ! ಯುನೈಟೆಡ್ ಸ್ಟೇಟ್ಸ್ ಏನನ್ನೂ ಕಳೆದುಕೊಳ್ಳುವುದಿಲ್ಲ. ವಾಸ್ತವವಾಗಿ, ಅನೇಕ ಹಡಗುಗಳು ಈಗ ಯುಎಸ್, ಟೆಕ್ಸಾಸ್, ಲೂಸಿಯಾನ ಮತ್ತು ಅಲಾಸ್ಕಾಗೆ ಲೋಡ್ ಮಾಡಲು ಹೋಗುತ್ತಿವೆ ಎಂದಿದ್ದಾರೆ.
ಇರಾನ್ ಅನಿಶ್ಚಿತತೆ
ಏಪ್ರಿಲ್ 22ಕ್ಕೆ ತಾತ್ಕಾಲಿಕ ಕದನ ವಿರಾಮದ ಗಡುವು ಮುಗಿಯಲಿದೆ. ಇದರ ನಡುವೆ ಟ್ರಂಪ್ ಎಚ್ಚರಿಕೆ ಮತ್ತು ಎರಡನೇ ಸುತ್ತಿನ ಮಾತುಕತೆಗಳು ಸಾಗಿವೆ. ಆದರೆ, ಅಮೆರಿಕದ ಶಾಂತಿ ಮಾತುಕತೆಗೆ ಸಿದ್ಧವಾಗಿದ್ದರೂ, ಇರಾನ್ ಮಾತುಕತೆಗೆ ಬರಲಿದೆಯೇ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.
ಮಾತುಕತೆಯ ಗಡುವು
ಅಂದಹಾಗೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಎರಡನೇ ಸುತ್ತಿನ ಶಾಂತಿ ಮಾತುಕತೆಗಾಗಿ ಅಮೆರಿಕದ ಪ್ರತಿನಿಧಿಗಳು ಸೋಮವಾರ ಸಂಜೆ (ಏಪ್ರಿಲ್ 20) ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ತಲುಪಲಿದ್ದಾರೆ.