ವಾಷಿಂಗ್ಟನ್: ಭಾರತ, ಚೀನಾ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ 60 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿತವು ಇತ್ತೀಚೆಗೆ ವಿಧಿಸಿರುವ ಶೇಕಡಾ 10 ರಿಂದ 12.5 ರಷ್ಟು ಹೊಸ ಆಮದು ಸುಂಕ (ಟ್ಯಾರಿಫ್) ನೀತಿಗೆ ಇದೀಗ ಅಮೆರಿಕದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಹೊಸ ಆಮದು ಸುಂಕಗಳನ್ನು (Tariffs) ಪ್ರಶ್ನಿಸಿ, ಅಮೆರಿಕದ 25 ಡೆಮಾಕ್ರಟಿಕ್ ನೇತೃತ್ವದ ರಾಜ್ಯಗಳು ಯುಎಸ್ ಇಂಟರ್ನ್ಯಾಷನಲ್ ಟ್ರೇಡ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿವೆ. ಈ ಬೆಳವಣಿಗೆ ಟ್ರಂಪ್ ಆಡಳಿತದ ಸುಂಕ ನೀತಿಗೆ ದೊಡ್ಡ ಕಾನೂನು ಸವಾಲಾಗಿ ಪರಿಣಮಿಸಿದ್ದು, ಅಮೆರಿಕದ ವ್ಯಾಪಾರ ನೀತಿಯ ಭವಿಷ್ಯದ ಮೇಲೂ ಕುತೂಹಲ ಮೂಡಿಸಿದೆ.
ಕಳೆದ ತಿಂಗಳು ಅಮೆರಿಕ ಭಾರತ ಸೇರಿದಂತೆ 59 ರಾಷ್ಟ್ರಗಳು ಹಾಗೂ ಯುರೋಪಿಯನ್ ಒಕ್ಕೂಟದ ಮೇಲೆ ಶೇ.10 ರಿಂದ ಶೇ.12.5ರವರೆಗೆ ಹೊಸ ಆಮದು ಸುಂಕವನ್ನು ವಿಧಿಸಿತ್ತು. ಈ ದೇಶಗಳು ಬಲವಂತದ ಕಾರ್ಮಿಕರಿಂದ ತಯಾರಾಗುವ ವಸ್ತುಗಳ ಆಮದು ತಡೆಯಲು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಕಾರಣವನ್ನು ವೈಟ್‌ಹೌಸ್ ಮುಂದಿಟ್ಟಿತ್ತು. ಆದರೆ, ರಾಜ್ಯಗಳು ಈ ಕಾರಣವನ್ನು ಕೇವಲ ನೆಪ ಎಂದು ಹೇಳಿದ್ದು, ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ ಹಿಂದಿನ ಸುಂಕಗಳ ಆದಾಯವನ್ನು ಮತ್ತೆ ಸಂಗ್ರಹಿಸುವ ಉದ್ದೇಶದಿಂದಲೇ ಹೊಸ ತೆರಿಗೆ ವಿಧಿಸಲಾಗಿದೆ ಎಂದು ಆರೋಪಿಸಿವೆ.
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಮಾತನಾಡಿ, "ಸುಪ್ರೀಂ ಕೋರ್ಟ್‌ನಲ್ಲಿ ಸೋತ ಬಳಿಕ ಟ್ರಂಪ್ ಆಡಳಿತ ಮತ್ತೆ ಹೊಸ ಸುಂಕಗಳ ಮೂಲಕ ಅಮೆರಿಕದ ಜನರು ಮತ್ತು ಉದ್ಯಮಗಳ ಮೇಲೆ ಕಾನೂನುಬಾಹಿರ ತೆರಿಗೆ ಹೊರಿಸಲು ಯತ್ನಿಸುತ್ತಿದೆ. ಇದು ನ್ಯಾಯಸಮ್ಮತ ಕ್ರಮವಲ್ಲ," ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ಜೊತೆಗೆ ಅರಿಜೋನಾ, ಕ್ಯಾಲಿಫೋರ್ನಿಯಾ, ಕೊಲೊರಾಡೊ, ಕನೆಕ್ಟಿಕಟ್, ಡೆಲಾವೇರ್, ಹವಾಯಿ, ಇಲಿನಾಯ್ಸ್, ಕೆಂಟಕಿ, ಮ್ಯಾಸಚೂಸೆಟ್ಸ್, ಮೆರಿಲ್ಯಾಂಡ್, ಮೈನ್, ಮಿಶಿಗನ್, ಮಿನೆಸೋಟಾ, ನೆವಾಡಾ, ನ್ಯೂಜೆರ್ಸಿ, ನ್ಯೂ ಮೆಕ್ಸಿಕೋ, ಉತ್ತರ ಕ್ಯಾರೊಲಿನಾ, ಒರೆಗಾನ್, ಪೆನ್ಸಿಲ್ವೇನಿಯಾ, ರೋಡ್ ಐಲ್ಯಾಂಡ್, ವರ್ಜೀನಿಯಾ, ವರ್ಮಾಂಟ್, ವಾಷಿಂಗ್ಟನ್ ಹಾಗೂ ವಿಸ್ಕಾನ್ಸಿನ್ ರಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಿವೆ.
ಟ್ರಂಪ್ ಅವರ ವಾದವೇ ಬೇರೆ. ಹೆಚ್ಚಿನ ಆಮದು ಸುಂಕ ವಿಧಿಸುವ ಮೂಲಕ ಅಮೆರಿಕದ ಉತ್ಪಾದನಾ ವಲಯಕ್ಕೆ ಉತ್ತೇಜನ ಸಿಗುತ್ತದೆ, ಸ್ಥಳೀಯ ಕೈಗಾರಿಕೆಗಳು ಬೆಳೆಯುತ್ತವೆ ಹಾಗೂ ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಅವರು ನಿರಂತರವಾಗಿ ಹೇಳುತ್ತಾ ಬಂದಿದ್ದಾರೆ.
ತಮ್ಮ ಮೊದಲ ಅವಧಿಯಲ್ಲಿಯೇ ಅವರು ಮುಕ್ತ ವ್ಯಾಪಾರಕ್ಕೆ ಆದ್ಯತೆ ನೀಡುತ್ತಿದ್ದ ಅಮೆರಿಕದ ಹಲವು ದಶಕಗಳ ನೀತಿಯನ್ನು ಬದಲಿಸಿ ಸುಂಕ ಹೆಚ್ಚಿಸುವ ನೀತಿಯನ್ನು ಅನುಸರಿಸಿದ್ದರು.
ಮೊದಲು ಟ್ರಂಪ್ 1977ರ ಇಂಟರ್‌ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆ್ಯಕ್ಟ್ (IEEPA) ಅಡಿಯಲ್ಲಿ ಜಾಗತಿಕ ಮಟ್ಟದಲ್ಲಿ ವ್ಯಾಪಕ ಸುಂಕಗಳನ್ನು ವಿಧಿಸಿದ್ದರು. ಅಮೆರಿಕದ ನಿರಂತರ ವ್ಯಾಪಾರ ಕೊರತೆಯೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಅವರು ವಾದಿಸಿದ್ದರು. ಆದರೆ, ಈ ವರ್ಷದ ಫೆಬ್ರವರಿಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ಐಇಇಪಿಎ ಕಾಯ್ದೆಯಡಿ ಅಧ್ಯಕ್ಷರಿಗೆ ಇಂತಹ ಸುಂಕ ವಿಧಿಸುವ ಅಧಿಕಾರ ಇಲ್ಲ ಎಂದು ಸ್ಪಷ್ಟವಾಗಿ ತೀರ್ಪು ನೀಡಿತ್ತು. ಇದರ ಪರಿಣಾಮವಾಗಿ ಈಗಾಗಲೇ ಸುಂಕ ಪಾವತಿಸಿದ್ದ ಆಮದುದಾರರಿಗೆ ಸರ್ಕಾರ ಹಣವನ್ನು ಹಿಂದಿರುಗಿಸಬೇಕಾಯಿತು.
ಆ ಬಳಿಕ ತಾತ್ಕಾಲಿಕವಾಗಿ ಶೇ.10ರ ಜಾಗತಿಕ ಸುಂಕವನ್ನು ಟ್ರಂಪ್ ಜಾರಿಗೆ ತಂದಿದ್ದರು. ಆದರೆ, ಅದು ಜುಲೈ 24ರಂದು ಮಧ್ಯರಾತ್ರಿಯಿಂದ ಅವಧಿ ಮುಗಿಯಿತು. ಅದರ ಬೆನ್ನಲ್ಲೇ ಈ ಬಾರಿ ಅವರು 1974ರ ಟ್ರೇಡ್ ಆ್ಯಕ್ಟ್‌ನ ಸೆಕ್ಷನ್ 301 ಅಡಿಯಲ್ಲಿ ಹೊಸ ಸುಂಕಗಳನ್ನು ಜಾರಿಗೊಳಿಸಿದ್ದಾರೆ.
ಸೆಕ್ಷನ್ 301 ಪ್ರಕಾರ, ಅಮೆರಿಕದ ವ್ಯಾಪಾರಕ್ಕೆ ಅನ್ಯಾಯವಾಗುವ ನೀತಿಗಳನ್ನು ಅನುಸರಿಸುವ ದೇಶಗಳ ವಿರುದ್ಧ ಅಧ್ಯಕ್ಷರು ಸುಂಕ ಸೇರಿದಂತೆ ವಿವಿಧ ನಿರ್ಬಂಧಗಳನ್ನು ವಿಧಿಸಬಹುದು. ಟ್ರಂಪ್ ತಮ್ಮ ಮೊದಲ ಆಡಳಿತಾವಧಿಯಲ್ಲಿ ಇದೇ ಕಾಯ್ದೆಯಡಿ ಚೀನಾ ವಿರುದ್ಧ ಭಾರೀ ಸುಂಕ ವಿಧಿಸಿದ್ದು, ಅದು ನ್ಯಾಯಾಲಯದಲ್ಲಿಯೂ ಮಾನ್ಯತೆ ಪಡೆದಿತ್ತು. ಇದೇ ಕಾರಣಕ್ಕೆ ಈ ಬಾರಿ ಕೂಡ ತಮ್ಮ ನಿರ್ಧಾರ ಕಾನೂನುಬದ್ಧವಾಗಿದೆ ಎಂದು ವೈಟ್‌ಹೌಸ್ ಸಮರ್ಥಿಸಿಕೊಂಡಿದೆ.
ವೈಟ್‌ಹೌಸ್ ವಕ್ತಾರ ಕುಶ್ ದೇಸಾಯಿ ಪ್ರತಿಕ್ರಿಯಿಸಿ, "ಅಮೆರಿಕದ ವಾಣಿಜ್ಯಕ್ಕೆ ಅನ್ಯಾಯವಾಗುವ ನೀತಿಗಳನ್ನು ತಡೆಯಲು ಸರ್ಕಾರ ತನ್ನ ಕಾನೂನುಬದ್ಧ ಅಧಿಕಾರವನ್ನೇ ಬಳಸುತ್ತಿದೆ. ಬಲವಂತದ ಕಾರ್ಮಿಕರಿಂದ ಉತ್ಪಾದನೆಯಾಗುವ ವಸ್ತುಗಳ ಆಮದು ತಡೆಯಲು ವಿಫಲವಾಗಿರುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಸೆಕ್ಷನ್ 301 ಅಡಿಯಲ್ಲಿ ವಿಧಿಸಿರುವ ಸುಂಕಗಳು ಹಿಂದೆಯೂ ನ್ಯಾಯಾಲಯದ ಪರೀಕ್ಷೆಯಲ್ಲಿ ಉಳಿದಿವೆ; ಈ ಬಾರಿಯೂ ಅವು ಕಾನೂನುಬದ್ಧವಾಗಿವೆ ಎಂದು ಹೇಳಿದ್ದಾರೆ.
ಆದರೆ, ದಾವೆ ಹೂಡಿರುವ ರಾಜ್ಯಗಳ ವಾದ ಭಿನ್ನವಾಗಿದೆ. ಸರ್ಕಾರ ಪ್ರತಿ ದೇಶದ ವಿರುದ್ಧ ಪ್ರತ್ಯೇಕ ತನಿಖೆ ನಡೆಸಿಲ್ಲ, ಯಾವ ದೇಶ ಯಾವ ರೀತಿಯಲ್ಲಿ ಅಮೆರಿಕದ ವ್ಯಾಪಾರಕ್ಕೆ ಹಾನಿ ಮಾಡಿದೆ ಎಂಬುದನ್ನು ಸಮರ್ಪಕವಾಗಿ ಸಾಬೀತುಪಡಿಸಿಲ್ಲ ಹಾಗೂ ಈ ಸುಂಕಗಳು ಸಮಸ್ಯೆಯನ್ನು ಹೇಗೆ ಪರಿಹರಿಸುತ್ತವೆ ಎಂಬುದಕ್ಕೂ ಸ್ಪಷ್ಟವಾದ ದಾಖಲೆಗಳನ್ನು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸೆಕ್ಷನ್ 301ರ ಪ್ರಕಾರ ಇಂತಹ ತನಿಖೆ ಮತ್ತು ಸಾರ್ವಜನಿಕ ದಾಖಲೆಗಳು ಕಡ್ಡಾಯವಾಗಿದ್ದರೂ ಸರ್ಕಾರ ಅದನ್ನು ಪಾಲಿಸಿಲ್ಲ ಎಂಬುದು ಅವರ ವಾದವಾಗಿದೆ.
ಈ ಮೊಕದ್ದಮೆಗೆ ಮುನ್ನ ಜುಲೈ ತಿಂಗಳಲ್ಲಿಯೇ ಎರಡು ಸಣ್ಣ ಉದ್ಯಮಗಳೂ ಇದೇ ಸೆಕ್ಷನ್ 301 ಸುಂಕಗಳನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ವ್ಯಾಪಾರ ನ್ಯಾಯಾಲಯದ ಮೊರೆ ಹೋಗಿದ್ದವು. ಈಗ 25 ರಾಜ್ಯಗಳು ಒಂದಾಗಿ ಹೋರಾಟ ಆರಂಭಿಸಿರುವುದರಿಂದ ಈ ಪ್ರಕರಣಕ್ಕೆ ಇನ್ನಷ್ಟು ಮಹತ್ವ ಬಂದಿದೆ.
ನ್ಯೂಯಾರ್ಕ್ ಲಾ ಸ್ಕೂಲ್‌ನ ಅಂತರರಾಷ್ಟ್ರೀಯ ಕಾನೂನು ಕೇಂದ್ರದ ಸಹ ನಿರ್ದೇಶಕ ಹಾಗೂ ಕಾನೂನು ತಜ್ಞ ಬ್ಯಾರಿ ಆಪಲ್‌ಟನ್ ಅಭಿಪ್ರಾಯಪಟ್ಟಂತೆ, ಟ್ರಂಪ್ ಆಡಳಿತ ಒಂದೇ ರೀತಿಯ ಜಾಗತಿಕ ಸುಂಕಗಳನ್ನು ಜಾರಿಗೊಳಿಸಲು ಈಗಾಗಲೇ ಮೂರು ವಿಭಿನ್ನ ಕಾನೂನುಗಳನ್ನು ಬಳಸಲು ಪ್ರಯತ್ನಿಸಿದೆ. ಈ ನೀತಿಗಳು ಬಹುತೇಕ ಒಂದೇ ಮಾದರಿಯಲ್ಲಿರುವುದರಿಂದ ಸರ್ಕಾರಕ್ಕೆ ನ್ಯಾಯಾಲಯದಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದು ಸುಲಭವಾಗುವುದಿಲ್ಲ.
ಆದಾಗ್ಯೂ, ಸೆಕ್ಷನ್ 301 ಹಿಂದೆ ಹಲವು ಅಧ್ಯಕ್ಷರು ಬಳಸಿರುವ ಸ್ಥಾಪಿತ ಕಾನೂನು ಆಗಿರುವುದರಿಂದ ಸರ್ಕಾರದ ಪರ ವಾದಕ್ಕೂ ಬಲವಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ವಾದ 'ನಮಗೆ ಅಧಿಕಾರವಿರಲಿಲ್ಲ' ಎನ್ನುವುದಲ್ಲ. ಬದಲಾಗಿ, 'ಕಾಂಗ್ರೆಸ್ ನಿಗದಿಪಡಿಸಿದ ಕಾನೂನು ಮಿತಿಯೊಳಗೇ ನಾವು ಕಾರ್ಯನಿರ್ವಹಿಸಿದ್ದೇವೆ' ಎಂಬುದಾಗಿರುತ್ತದೆ. ಅಂತಿಮವಾಗಿ ನ್ಯಾಯಾಲಯ ಯಾವ ವಾದವನ್ನು ಒಪ್ಪಿಕೊಳ್ಳುತ್ತದೆ ಎಂಬುದರ ಮೇಲೆ ಈ ಪ್ರಕರಣದ ಭವಿಷ್ಯ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆ ಭಾರತ ಸೇರಿದಂತೆ ಹೊಸ ಸುಂಕಕ್ಕೆ ಒಳಪಟ್ಟಿರುವ ಎಲ್ಲಾ ದೇಶಗಳಿಗೂ ಮಹತ್ವದ್ದಾಗಿದೆ. ನ್ಯಾಯಾಲಯ ಟ್ರಂಪ್ ಆಡಳಿತದ ವಿರುದ್ಧ ತೀರ್ಪು ನೀಡಿದರೆ, ಈ ಹೊಸ ಸುಂಕಗಳ ಜಾರಿಗೆ ಅಡ್ಡಿಯಾಗುವ ಸಾಧ್ಯತೆಯಿದ್ದು, ಅಮೆರಿಕದ ವ್ಯಾಪಾರ ನೀತಿಯಲ್ಲಿ ಮತ್ತೊಮ್ಮೆ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡಬಹುದು.