ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ಮತ್ತು ಹಿಂಸಾಚಾರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಈಗ ರಾಜಕೀಯ ಬೆಳವಣಿಗೆಗಳ ಕಾವು ಕ್ರೀಡಾಪಟುಗಳ ಮನೆಗೂ ತಟ್ಟಲು ಪ್ರಾರಂಭಿಸಿದೆ. ಅದರಂತೆ, ಬಾಂಗ್ಲಾದೇಶದ ಖ್ಯಾತ ಕ್ರಿಕೆಟಿಗ ಮತ್ತು ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ಮನೆಗೆ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದು, ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಅದರಲ್ಲೂ, ಭಾರತದ ನವದೆಹಲಿಯಲ್ಲಿ ನಡೆದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಶಕೀಬ್ ಪಾಲ್ಗೊಂಡ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ನವದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಮಾತನಾಡಿದ್ದರು. ಈ ವೇಳೆ ಮಾಜಿ ಅವಾಮಿ ಲೀಗ್ ಸಂಸದರಾಗಿರುವ ಶಕೀಬ್ ಅಲ್ ಹಸನ್ ಅವರು ಕೂಡ ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಹಾಗಾಗಿ, ದುಷ್ಕರ್ಮಿಗಳು ಮಗುರಾ ಪಟ್ಟಣದ ಕೇಶಬ್‌ಮೋರ್ ಪ್ರದೇಶದಲ್ಲಿರುವ ಶಕೀಬ್ ಅಲ್ ಹಸನ್ ಅವರ ಮನೆಗೆ ಬುಧವಾರ ರಾತ್ರಿ ಸುಮಾರು 8:45 ರಿಂದ 9:00 ರ ನಡುವೆ ಪೆಟ್ರೋಲ್ ಬಾಂಬ್ ಎಸೆದು, ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಮುಂದುವರೆದು, ಬೈಕ್ನಲ್ಲಿ ಬಂದ ಅಪರಿಚಿತ ಕಿಡಿಗೇಡಿಗಳು ಮನೆಯ ಕಿಟಕಿಗಳ ಮೇಲೆ ಕಲ್ಲುಗಳನ್ನು ಎಸೆದು ಧ್ವಂಸಗೊಳಿಸಿದ್ದಾರೆ. ನಂತರ ಕಬ್ಬಿಣದ ಗೇಟ್ ಮತ್ತು ಮೇಲಿನ ಮಹಡಿಯ ಭಾಗಕ್ಕೆ ಪೆಟ್ರೋಲ್ ಬಾಂಬ್ ತರಹದ ವಸ್ತುವನ್ನು ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಆದ್ರೆ, ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಯಾರೂ ಇರದ ಕಾರಣ ಯಾರಿಗೂ ಗಾಯಗಳಾಗಿಲ್ಲ ಎನ್ನಲಾಗಿದೆ. ಇನ್ನು ಘಟನೆಯಿಂದ ತಕ್ಷಣವೇ ಎಚ್ಚೆತ್ತ ಅಕ್ಕ-ಪಕ್ಕದ ಮನೆಯವರು ಬೆಂಕಿಯನ್ನು ನಂದಿಸಿದ್ದರಿಂದ ದೊಡ್ಡ ಮಟ್ಟದ ಹಾನಿ ತಪ್ಪಿದೆ.
ಏತನ್ಮಧ್ಯೆ, ಬಾಂಗ್ಲಾದೇಶದ ಮಗುರಾ-1 ಕ್ಷೇತ್ರದಿಂದ ಸಂಸದರಾಗಿದ್ದ ಶಕೀಬ್ ಅಲ್ ಹಸನ್, 2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿ ಚಳುವಳಿಯ ಕಾರಣದಿಂದ ಶೇಖ್ ಹಸೀನಾ ಸರ್ಕಾರ ಪತನಗೊಂಡ ತರುವಾಯು ದೇಶದಿಂದಲೇ ಪಲಾಯನ ಮಾಡಿದ್ದರು. ಜೊತೆಗೆ ಆ ವೇಳೆ ನಡೆದ ಕೊಲೆ ಪ್ರಕರಣವೊಂದರಲ್ಲಿ ಶಕೀಬ್ ವಿರುದ್ಧವೂ FIR ದಾಖಲಾಗಿದೆ.