ಕೈರೋ: ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಒಮನ್‌ನೊಂದಿಗೆ ಒಪ್ಪಂದದ ಕರಡು ಸಿದ್ಧಪಡಿಸುವ ಕಾರ್ಯ "ಅಂತಿಮ ಹಂತದಲ್ಲಿದೆ" ಎಂದು ಇರಾನ್ ತಿಳಿಸಿದೆ. ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಾರವೇ ಒಪ್ಪಂದದ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದ ಯಶಸ್ವಿಯಾದರೆ, ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಪ್ರಮುಖವಾದ ಈ ಜಲಮಾರ್ಗವನ್ನು ಪುನಃ ತೆರೆಯುವ ಮೂಲಕ ವಿಶ್ವ ಆರ್ಥಿಕತೆಯ ಮೇಲಿನ ಒತ್ತಡ ಕಡಿಮೆಯಾಗಬಹುದು ಹಾಗೂ ನಡೆಯುತ್ತಿರುವ ಯುದ್ಧ ಅಂತ್ಯಗೊಳ್ಳುವ ಸಾಧ್ಯತೆಯೂ ಇದೆ.
ಆದರೆ, ಈ ಒಪ್ಪಂದವು ಇರಾನ್ ಬಂದರುಗಳ ಮೇಲಿನ ಅಮೆರಿಕದ ನಿರ್ಬಂಧವನ್ನು ತೆರವುಗೊಳಿಸುವ ಷರತ್ತಿನ ಮೇಲೆ ಅವಲಂಬಿತವಾಗಿರುವ ಸಾಧ್ಯತೆಯಿದೆ. ಇರಾನ್‌ಗೆ ಹಾರ್ಮುಜ್ ಜಲಸಂಧಿಯ ಮೇಲೆ ಶಾಶ್ವತ ಹಿಡಿತ ನೀಡುವ ಯಾವುದೇ ಒಪ್ಪಂದವನ್ನು ಅಮೆರಿಕ ಈ ಹಿಂದೆ ತಿರಸ್ಕರಿಸಿತ್ತು. ಅಂತಹ ಒಪ್ಪಂದವು ಅಮೆರಿಕಕ್ಕೆ ದೊಡ್ಡ ರಾಜತಾಂತ್ರಿಕ ಹಿನ್ನಡೆಯಾಗುವುದರ ಜೊತೆಗೆ ಜಾಗತಿಕ ಸಮುದ್ರ ಕಾನೂನುಗಳಿಗೂ ವಿರುದ್ಧವಾಗಲಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.
ಇರಾನ್ ಮಾತ್ರ, ಜಲಸಂಧಿಯ ಮೇಲೆ ಕನಿಷ್ಠ ಮಟ್ಟದ ನಿಯಂತ್ರಣ ತನ್ನಲ್ಲಿರಬೇಕು ಎಂಬ ನಿಲುವನ್ನು ಪುನರುಚ್ಚರಿಸಿದ್ದು, ಯುದ್ಧಕ್ಕೂ ಮುನ್ನ ಇದ್ದಂತೆ ಇದನ್ನು ಮತ್ತೆ ಸಂಪೂರ್ಣ ಮುಕ್ತ ಅಂತಾರಾಷ್ಟ್ರೀಯ ಜಲಮಾರ್ಗವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ವರ್ಷ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಸರ್ಕಾರವನ್ನು ಉರುಳಿಸುವುದು ಹಾಗೂ ಅದರ ಅಣು ಕಾರ್ಯಕ್ರಮವನ್ನು ಕೊನೆಗೊಳಿಸುವುದು ಸೇರಿದಂತೆ ಹಲವು ಉದ್ದೇಶಗಳನ್ನು ಉಲ್ಲೇಖಿಸಿ ಯುದ್ಧ ಆರಂಭಿಸಿದ್ದವು. ಆದರೆ ಆ ಗುರಿಗಳು ಈವರೆಗೆ ಈಡೇರಿಲ್ಲ. ಈಗ ಯುದ್ಧದ ಕೇಂದ್ರಬಿಂದುವೇ ಹಾರ್ಮುಜ್ ಜಲಸಂಧಿಯಾಗಿದೆ. ಇರಾನ್ ತನ್ನ ನಿಯಂತ್ರಣವನ್ನು ಬಲಪಡಿಸಿರುವುದು ಹಾಗೂ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವ ಪರಿಣಾಮ, ಈ ಮಾರ್ಗದ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.
ವಿಶ್ವದ ವ್ಯಾಪಾರವಾಗುವ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಸಾಗುತ್ತಿದ್ದ ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜಾಗತಿಕ ಆರ್ಥಿಕತೆ ಅಸ್ಥಿರಗೊಂಡಿದೆ. ಇದೇ ವೇಳೆ, ಅಮೆರಿಕದ ಸಂಸತ್ ಚುನಾವಣೆಗೆ ಮುನ್ನ ಜನಪ್ರಿಯತೆ ಕಳೆದುಕೊಂಡಿರುವ ಯುದ್ಧವನ್ನು ಅಂತ್ಯಗೊಳಿಸುವ ಒತ್ತಡ ಡೊನಾಲ್ಡ್ ಟ್ರಂಪ್ ಮೇಲೂ ಹೆಚ್ಚಾಗಿದೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ, ಒಮನ್‌ನೊಂದಿಗೆ ನಡೆಯುತ್ತಿರುವ ಒಪ್ಪಂದದ ಕರಡು ಅಂತಿಮ ಹಂತದಲ್ಲಿದ್ದು, ಕೆಲವು ಪಕ್ಷಗಳು ಈ ಪ್ರಕ್ರಿಯೆಗೆ ಅಡ್ಡಿಪಡಿಸದಿದ್ದರೆ ಜಂಟಿ ಪ್ರಕಟಣೆ ಹೊರಬೀಳಲಿದೆ ಎಂದು ಹೇಳಿದ್ದಾರೆ. ಅವರು ಉಲ್ಲೇಖಿಸಿದ ಕೆಲವು ಪಕ್ಷಗಳು ಎಂದರೆ ಅಮೆರಿಕವೇ ಎಂಬುದು ಸ್ಪಷ್ಟವಾಗಿದೆ.
ಪ್ರಾದೇಶಿಕ ಅಧಿಕಾರಿಗಳ ಮಾಹಿತಿ ಪ್ರಕಾರ, ಇರಾನ್ ಮತ್ತು ಒಮನ್ ಮಾತುಕತೆ ತಂಡಗಳು ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ಒಪ್ಪಂದದ ಕರಡನ್ನು ಅಂತಿಮಗೊಳಿಸಿದ್ದು, ಈಗ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ ಅವರ ಅಂತಿಮ ಅನುಮೋದನೆಗಾಗಿ ಕಾಯುತ್ತಿವೆ. ಯುದ್ಧದ ಆರಂಭಿಕ ದಾಳಿಯಲ್ಲಿ ಖಮೇನಿ ಗಾಯಗೊಂಡಿದ್ದಾರೆ ಎಂದು ನಂಬಲಾಗಿದ್ದು, ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಮಾತುಕತೆಗಳ ಬಗ್ಗೆ ಮಾಹಿತಿ ಹೊಂದಿರುವ ಇಬ್ಬರು ಅಧಿಕಾರಿಗಳು, ಈ ಒಪ್ಪಂದವನ್ನು ಜಲಸಂಧಿ ವಿವಾದಕ್ಕೆ ತಾತ್ಕಾಲಿಕ ಪರಿಹಾರವೆಂದು ಬಣ್ಣಿಸಿದ್ದಾರೆ. ಜೂನ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಯುದ್ಧ ವಿರಾಮ ಹಾಗೂ ಜಲಮಾರ್ಗ ಪುನರಾರಂಭಿಸುವ ಉದ್ದೇಶದ ಒಪ್ಪಂದವೇ ನಂತರ ವಿಫಲವಾಗಿತ್ತು. ಈಗಿನ ಒಪ್ಪಂದ ಅದೇ ಪ್ರಯತ್ನದ ಮುಂದುವರಿದ ಭಾಗವಾಗಿದೆ ಎಂದು ತಿಳಿಸಿದರು.
ಗುಪ್ತ ಮಾತುಕತೆಗಳ ಕುರಿತು ಅನಾಮಧೇಯವಾಗಿ ಮಾತನಾಡಿದ ಅಧಿಕಾರಿಗಳ ಪ್ರಕಾರ, ಈ ಒಪ್ಪಂದವು ಇರಾನ್ ನ ಅಣು ಕಾರ್ಯಕ್ರಮದ ಕುರಿತು ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳನ್ನು ಪುನಾರಂಭಿಸಲು ದಾರಿ ಮಾಡಿಕೊಡಲಿದೆ.
ಈ ಹಿಂದೆ ನೀಡಿದ್ದ ಮಾಹಿತಿಯಂತೆ, ಹಡಗುಗಳು ಪರ್ಷಿಯನ್ ಕೊಲ್ಲಿಯನ್ನು ಇರಾನ್ ನಿಯಂತ್ರಣದ ಮಾರ್ಗದ ಮೂಲಕ ಪ್ರವೇಶಿಸಿ, ಒಮನ್ ನಿಯಂತ್ರಣದ ಮಾರ್ಗದ ಮೂಲಕ ಹೊರಬರುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಭದ್ರತೆ ಮತ್ತು ಸಮುದ್ರ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸೇವಾ ಶುಲ್ಕ ವಸೂಲಿ ಮಾಡುವ ಪ್ರಸ್ತಾವವೂ ಕರಡಿನಲ್ಲಿ ಇದೆ. ಆದರೆ, ಇರಾನ್ ಶುಲ್ಕ ವಿಧಿಸುವ ಯಾವುದೇ ವ್ಯವಸ್ಥೆಗೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹಾರ್ಮುಜ್ ಜಲಸಂಧಿ ಪುನಃ ತೆರೆಯುವ ಕುರಿತು ಡೊನಾಲ್ಡ್ ಟ್ರಂಪ್ ಘೋಷಣೆ ಸಾಧ್ಯ ಎಂದು ಪ್ರಕಟಿಸಿದ್ದ Axios ವರದಿಯ ಬಗ್ಗೆ ಮಂಗಳವಾರ ರಾತ್ರಿ ಟ್ರಂಪ್ ಅವರನ್ನು ಪತ್ರಕರ್ತರು ಪ್ರಶ್ನಿಸಿದ್ದರು, ಅದು ಸಾಧ್ಯ. ನಾಳೆ ಅಥವಾ ನಾಡಿದ್ದು ಆಗಬಹುದು. ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಟ್ರಂಪ್ ಹೇಳಿದ್ದರು.
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ನಿನ್ನೆ ಬುಧವಾರ, ಇರಾನ್ ವಿಷಯದಲ್ಲಿ ಪ್ರಗತಿ ಕಾಣಿಸುತ್ತಿಲ್ಲ ಎಂಬ ಭಾವನೆ ಮೂಡಬಹುದು ಎಂದು ಒಪ್ಪಿಕೊಂಡರು. ಯುದ್ಧ ಅಂತ್ಯಗೊಳಿಸುವ ಪ್ರಯತ್ನ ಸಂಕೀರ್ಣವಾಗಿದ್ದು, ಅದಕ್ಕೆ ಇನ್ನೂ ಸಮಯ ಬೇಕಾಗುತ್ತದೆ ಎಂದರು.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಇರಾನ್‌ನವರೊಂದಿಗೆ ಮಾತುಕತೆ ನಡೆಸುವುದು ಅತ್ಯಂತ ಕಷ್ಟಕರ. ಕೆಲವೊಮ್ಮೆ ಮುಂದೆ ಸಾಗಲು ಮೊದಲು ಹಿಂದೆ ಸರಿಯಬೇಕಾಗುತ್ತದೆ ಎಂದು ವ್ಯಾನ್ಸ್ ಹೇಳಿದರು.
ಇದೇ ವೇಳೆ, ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಆರಂಭದಲ್ಲಿ ಇಳಿಕೆಯಾಗಿದ್ದರೂ ಬಳಿಕ ಮತ್ತೆ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ ಸುಮಾರು 80 ಡಾಲರ್ ತಲುಪಿತು. ಆದರೂ, ಯುದ್ಧದ ತೀವ್ರ ಅವಧಿಯಲ್ಲಿದ್ದ ಮಟ್ಟಕ್ಕಿಂತ ಇದು ಕಡಿಮೆಯಾಗಿದೆ.
ಕಳೆದ ಕೆಲವು ದಿನಗಳಿಂದ ಡೊನಾಲ್ಡ್ ಟ್ರಂಪ್ ಒಂದು ಕಡೆ ಭಾರೀ ದಾಳಿಯ ಎಚ್ಚರಿಕೆ ನೀಡುತ್ತಾ, ಮತ್ತೊಂದು ಕಡೆ ರಾಜತಾಂತ್ರಿಕ ಮಾತುಕತೆಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು, ಸೌದಿ ಅರೇಬಿಯಾದ ಯನ್‌ಬು ಬಂದರು ಸಮೀಪ ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸೌದಿ ತೈಲ ಟ್ಯಾಂಕರ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯ ನೀಡಿಲ್ಲ. ಸೌದಿ ಅರೇಬಿಯಾದಿಂದಲೂ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಯೆಮೆನ್ ಸಮೀಪದ ಏಡನ್ ಕೊಲ್ಲಿಯಲ್ಲಿ ಸಾಗುತ್ತಿದ್ದ ಹಡಗೊಂದು ತನ್ನ ಸಮೀಪದಲ್ಲೇ ಭಾರೀ ಸ್ಫೋಟ ಸಂಭವಿಸಿದೆ ಎಂದು ಬ್ರಿಟನ್‌ನ United Kingdom Maritime Trade Operations (UKMTO) ಕೇಂದ್ರಕ್ಕೆ ಮಾಹಿತಿ ನೀಡಿದೆ. ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು UKMTO ತಿಳಿಸಿದೆ. ಈ ಘಟನೆಯ ಹೊಣೆಗಾರಿಕೆಯನ್ನೂ ಹೌತಿಗಳು ಹೊತ್ತಿದ್ದಾರೆ.
ಹೌತಿಗಳು ಮತ್ತು ಸೌದಿ ಅರೇಬಿಯಾ ನಡುವಿನ ಇತ್ತೀಚಿನ ಉದ್ವಿಗ್ನತೆ, ಯೆಮೆನ್‌ನ ಒಳಯುದ್ಧವನ್ನು ಮತ್ತೆ ಭುಗಿಲೆಬ್ಬಿಸುವ ಆತಂಕ ಮೂಡಿಸಿದೆ.
ಜುಲೈನಲ್ಲಿ ಹೌತಿಗಳು, ಕೆಂಪು ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಬಾಬ್ ಎಲ್-ಮಂದೆಬ್ ಜಲಸಂಧಿಯನ್ನು ಸೌದಿ ಸಂಪರ್ಕಿತ ಹಡಗುಗಳಿಗೆ ಮುಚ್ಚುವುದಾಗಿ ಘೋಷಿಸಿದ್ದರು. ಯುದ್ಧದ ಅವಧಿಯಲ್ಲಿ ಸೌದಿ ತೈಲ ರಫ್ತಿಗೆ ಕೆಂಪು ಸಮುದ್ರವೇ ಪ್ರಮುಖ ಪರ್ಯಾಯ ಮಾರ್ಗವಾಗಿದ್ದ ಕಾರಣ, ಈ ಕ್ರಮವು ಜಾಗತಿಕ ಸಾಗಾಣಿಕೆ ವ್ಯವಸ್ಥೆಯ ಮೇಲೂ ಹೆಚ್ಚುವರಿ ಒತ್ತಡ ಉಂಟುಮಾಡಿದೆ.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆಯ ನಡುವಿನ ಕದನ ವಿರಾಮ ಮತ್ತಷ್ಟು ಅಸ್ಥಿರಗೊಂಡಿದೆ. ದಕ್ಷಿಣ ಲೆಬನಾನ್‌ನ ಮನ್ಸೌರಿ ಗ್ರಾಮದ ನಿವಾಸಿಗಳಿಗೆ ಇಸ್ರೇಲ್ ಸೇನೆ ಸ್ಥಳಾಂತರ ಎಚ್ಚರಿಕೆ ನೀಡಿದ್ದು, ಹಲವು ವಾರಗಳ ಬಳಿಕ ಇದೇ ಮೊದಲ ಎಚ್ಚರಿಕೆಯಾಗಿದೆ.
ನಂತರ, ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದ ಇಸ್ರೇಲ್ ಸೇನೆ, ದಕ್ಷಿಣ ಲೆಬನಾನ್‌ನಲ್ಲಿ ನಿಖರ ಗುರಿಯ ದಾಳಿಗಳನ್ನು ಆರಂಭಿಸಿರುವುದಾಗಿ ತಿಳಿಸಿತು.
ಇದೇ ವೇಳೆ, ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ರದೇಶಗಳಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಹಾಗೂ ಅದರ ಬದಲಾಗಿ ಹೆಜ್ಬೊಲ್ಲಾ ನಿಶಸ್ತ್ರೀಕರಣಕ್ಕೆ ಒಪ್ಪಿಕೊಳ್ಳುವ ಕುರಿತು ನಡೆದಿರುವ ಒಪ್ಪಂದ ಜಾರಿಯ ಬಗ್ಗೆ ಚರ್ಚಿಸಲು ಲೆಬನಾನ್ ಮತ್ತು ಇಸ್ರೇಲ್‌ನ ಪ್ರತಿನಿಧಿಗಳು ರೋಮ್‌ನಲ್ಲಿ ಎರಡನೇ ದಿನವೂ ಮಾತುಕತೆ ನಡೆಸಿದರು.
ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು, ತಳಮಟ್ಟದಲ್ಲಿ ನಡೆದ ಬೆಳವಣಿಗೆಗಳ ಕಾರಣ ರೋಮ್ ಮಾತುಕತೆಗಳು ನಿಗದಿಗಿಂತ ಮುಂಚೆಯೇ ಮುಕ್ತಾಯಗೊಂಡಿವೆ ಎಂದು ತಿಳಿಸಿದ್ದಾರೆ. ಆದರೆ, ಇಂದು ಮತ್ತೆ ಮಾತುಕತೆ ಮುಂದುವರಿಯುವ ಸಾಧ್ಯತೆ ಇದೆ. ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿದ ಅವರು, ಚರ್ಚೆಗಳು ಅತ್ಯಂತ ಫಲಪ್ರದವಾಗಿದ್ದವು ಎಂದು ಹೇಳಿದ್ದಾರೆ.