ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ 
ವಿದೇಶ

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?

ಇರಾನ್‌ನ ಸರ್ಕಾರದ ಬೆಂಬಲ ಹೊಂದಿರುವ ಮೆಹರ್ ನ್ಯೂಸ್ ಈ ದೃಶ್ಯಾವಳಿಯನ್ನು ಮೊದಲ ಬಾರಿಗೆ ಪ್ರಸಾರ ಮಾಡಿದೆ. ಇರಾನ್ ಸರ್ಕಾರದ ಇಸ್ಲಾಮಿಕ್ ಡೆವಲಪ್‌ಮೆಂಟ್ ಆರ್ಗನೈಸೇಶನ್‌ನೊಂದಿಗೆ ಈ ಸುದ್ದಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳ ನಡುವೆಯೇ, ಇರಾನ್ ಸರ್ಕಾರಿ ಮಾಧ್ಯಮಗಳು ಖಮೇನಿ ಅವರ ಮೊದಲ ವಿಡಿಯೋವನ್ನು ಬಿಡುಗಡೆ ಮಾಡಿವೆ.

ಅರೆ-ಅಧಿಕೃತ ಮಾಧ್ಯಮ ಸಂಸ್ಥೆ ಮೆಹರ್ ನ್ಯೂಸ್, ಖಮೇನಿ ಅವರ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ವಿಡಿಯೋವನ್ನು ಇರಾನ್ ಬಿಡುಗಡೆ ಮಾಡಿದ್ದು, ಅವರ ಆರೋಗ್ಯ ಮತ್ತು ಅವರು ಎಲ್ಲಿದ್ದಾರೆ ಎಂಬ ಕುರಿತಾಗಿ ಹರಡುತ್ತಿರುವ ಊಹಾಪೋಹಗಳಿಗೆ ತಿರುಗೇಟು ನೀಡಿದೆ.

ಮೆಹರ್ ನ್ಯೂಸ್ ಬಿಡುಗಡೆ ಮಾಡಿರುವ ಈ ವಿಡಿಯೋ ಯಾವ ದಿನ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿಡಿಯೋದಲ್ಲಿ ಮೊಜ್ತಾಬಾ ಖಮೇನಿ ಆರೋಗ್ಯವಾಗಿರುವಂತೆ ಕಾಣಿಸುತ್ತಾರೆ.

ಇರಾನ್‌ನ ಸರ್ಕಾರದ ಬೆಂಬಲ ಹೊಂದಿರುವ ಮೆಹರ್ ನ್ಯೂಸ್ ಈ ದೃಶ್ಯಾವಳಿಯನ್ನು ಮೊದಲ ಬಾರಿಗೆ ಪ್ರಸಾರ ಮಾಡಿದೆ. ಇರಾನ್ ಸರ್ಕಾರದ ಇಸ್ಲಾಮಿಕ್ ಡೆವಲಪ್‌ಮೆಂಟ್ ಆರ್ಗನೈಸೇಶನ್‌ನೊಂದಿಗೆ ಈ ಸುದ್ದಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಇತ್ತೀಚೆಗೆ ಇಸ್ರೇಲ್‌ನ ಮಾಧ್ಯಮಗಳಲ್ಲಿ ಮೊಜ್ತಾಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಗಂಭೀರ ವರದಿಗಳು ಪ್ರಕಟವಾಗಿದ್ದವು. ಶುಕ್ರವಾರ ಪ್ರಕಟವಾದ ವರದಿಗಳಲ್ಲಿ ಅವರು ‘ಅತ್ಯಂತ ಗಂಭೀರ ಸ್ಥಿತಿಯಲ್ಲಿ’ ಇದ್ದಾರೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿತ್ತು.

ಇಸ್ರೇಲ್‌ನ ಚಾನೆಲ್ 14, ಇರಾನ್‌ನೊಳಗಿನ ಮೂಲಗಳನ್ನು ಉಲ್ಲೇಖಿಸಿ ಖಮೇನಿ ಅವರ ಆರೋಗ್ಯದ ಬಗ್ಗೆ ಇರಾನ್‌ನ ನಾಯಕತ್ವದಲ್ಲಿ ಆತಂಕ ವ್ಯಕ್ತವಾಗುತ್ತಿದೆ ಎಂದು ವರದಿ ಮಾಡಿತ್ತು.

ಇದೇ ವೇಳೆ, ದಿ ಜೆರುಸಲೇಮ್ ಪೋಸ್ಟ್ ಕೂಡ ಇರಾನ್‌ವೈರ್ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಆಡಳಿತಕ್ಕೆ ಸಮೀಪವಿರುವ ಮೂಲಗಳನ್ನು ಉಲ್ಲೇಖಿಸಿ ಖಮೇನಿ ಅವರ ಆರೋಗ್ಯದ ಕುರಿತು ಅನುಮಾನಗಳು ಹೆಚ್ಚಾಗಿವೆ ಎಂದು ವರದಿ ಮಾಡಿತ್ತು.

ಆ ವರದಿಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಯೊಬ್ಬರು, ‘ಶೀಘ್ರದಲ್ಲೇ ಅವರ ನಿಧನದ ಸುದ್ದಿ ಕೇಳಿದರೂ ಅಚ್ಚರಿಯಿಲ್ಲ’ ಎಂಬ ರೀತಿಯಲ್ಲಿ ಹೇಳಿಕೆ ನೀಡಿರುವುದಾಗಿ ತಿಳಿಸಲಾಗಿತ್ತು.

ಮೊಜ್ತಾಬಾ ಖಮೇನಿ ಅವರು ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್‌ನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ಸೇನಾ ದಾಳಿಯಲ್ಲಿ ಅಲಿ ಖಮೇನಿ ಮೃತಪಟ್ಟ ಬಳಿಕ ಮೊಜ್ತಬಾ ಖಮೇನಿ ಹೊಸ ಸರ್ವೋಚ್ಚ ನಾಯಕರಾಗಿ ಅಧಿಕಾರ ಸ್ವೀಕರಿಸಿದ್ದರು.

ಆದರೆ, ಅಧಿಕಾರ ವಹಿಸಿಕೊಂಡ ನಂತರ ಮೊಜ್ತಬಾ ಖಮೇನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ನೇರವಾಗಿ ಜನರನ್ನುದ್ದೇಶಿಸಿ ಮಾತನಾಡುವ ಬದಲು ಲಿಖಿತ ಹೇಳಿಕೆಗಳ ಮೂಲಕವೇ ತಮ್ಮ ಸಂದೇಶಗಳನ್ನು ನೀಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯ, ಸುರಕ್ಷತೆ ಹಾಗೂ ಅವರು ನಿಜವಾಗಿ ಎಲ್ಲಿದ್ದಾರೆ ಎಂಬ ಪ್ರಶ್ನೆಗಳು ನಿರಂತರವಾಗಿ ಕೇಳಿಬರುತ್ತಿವೆ.

ಅಲಿ ಖಮೇನಿ ಅವರ ನಿವಾಸದ ಮೇಲೆ ನಡೆದ ಆರಂಭಿಕ ದಾಳಿಯ ಸಂದರ್ಭದಲ್ಲಿ ಮೊಜ್ತಬಾ ಖಮೇನಿ ಗಾಯಗೊಂಡಿದ್ದರು ಎಂಬ ವರದಿಗಳೂ ಈ ಹಿಂದೆ ಹೊರಬಿದ್ದಿದ್ದವು. ಅವರ ಮುಖ ಅಥವಾ ದೇಹಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿರಬಹುದು ಮತ್ತು ಇದೇ ಕಾರಣಕ್ಕೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಗುಪ್ತ ಸ್ಥಳದಲ್ಲಿ ಉಳಿದಿದ್ದಾರೆ ಎಂಬ ಮಾತುಗಳೂ ಕೂಡ ಕೇಳಿಬಂದಿದ್ದವು.

ಕೆಲವು ವರದಿಗಳ ಪ್ರಕಾರ, ಗುರಿಯಾಗುವ ಸಾಧ್ಯತೆಯನ್ನು ತಪ್ಪಿಸಲು ಮೊಜ್ತಬಾ ಖಮೇನಿ ಅವರು ಇರಾನ್‌ನ ಹಿರಿಯ ಅಧಿಕಾರಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಬದಲು ಮಧ್ಯವರ್ತಿಗಳ ಮೂಲಕ ನಿಧಾನಗತಿಯ ಸಂಪರ್ಕ ಜಾಲವನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಮಾಹಿತಿಯನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ.

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕೂಡ ಸರ್ವೋಚ್ಚ ನಾಯಕರೊಂದಿಗೆ ನೇರ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ ಎಂದು ಹೇಳಿರುವುದು ಈ ಹಿಂದೆ ಗಮನ ಸೆಳೆದಿತ್ತು.

ರಾಜ್ಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಪ್ರಸ್ತುತ ಸರ್ವೋಚ್ಚ ನಾಯಕರೊಂದಿಗೆ ನೇರವಾಗಿ ಸಂವಹನ ನಡೆಸುವುದು ‘ಬಹಳ ಕಷ್ಟಕರ’ವಾಗಿದೆ ಎಂದು ಪೆಜೆಶ್ಕಿಯಾನ್ ಹೇಳಿದ್ದರು.

ಮೊಜ್ತಬಾ ಖಮೇನಿ ಅವರ ಇರುವಿಕೆಯ ಕುರಿತು ವಿದೇಶಿ ಮಾಧ್ಯಮಗಳಲ್ಲಿಯೂ ಹಲವು ವರದಿಗಳು ಪ್ರಕಟವಾಗಿವೆ. ಜುಲೈನಲ್ಲಿ ಸೌದಿ ಅರೇಬಿಯಾದ ಅಲ್-ಹದತ್ ಮಾಧ್ಯಮ ಸಂಸ್ಥೆ, ಇಸ್ರೇಲಿ ಭದ್ರತಾ ಮೂಲವೊಂದನ್ನು ಉಲ್ಲೇಖಿಸಿ, ಖಮೇನಿ ಇರಾನ್‌ನಲ್ಲಿಯೇ ಇಲ್ಲ ಎಂದು ವರದಿ ಮಾಡಿತ್ತು.

ಇದೇ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್‌ನ ಉನ್ನತ ಸೇನಾ ನಾಯಕತ್ವವನ್ನು ಅಮೆರಿಕದ ಸೇನಾ ಕಾರ್ಯಾಚರಣೆಯಲ್ಲಿ ನಾಶಪಡಿಸಲಾಗಿದೆ ಎಂದು ಹೇಳಿದ್ದರು.

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಮೊಜ್ತಬಾ ಖಮೇನಿ ‘ಶೇ.90ರಷ್ಟು ಹೋಗಿದ್ದಾರೆ’ ಹಾಗೂ ಸೇನಾ ಕಾರ್ಯಾಚರಣೆಯ ನಂತರ ಅವರು ಅಸಮರ್ಥರಾಗಿದ್ದಾರೆ ಎಂಬರ್ಥದ ಹೇಳಿಕೆಯನ್ನು ಟ್ರಂಪ್ ನೀಡಿದ್ದರು.

ಆದರೆ, ಖಮೇನಿ ಅವರ ಆರೋಗ್ಯದ ಕುರಿತು ಹರಿದಾಡುತ್ತಿರುವ ಗಂಭೀರ ವರದಿಗಳನ್ನು ಇರಾನ್ ಸರ್ಕಾರದ ಅಧಿಕಾರಿಗಳು ಈ ಹಿಂದೆ ತಳ್ಳಿಹಾಕಿದ್ದರು.

ಇರಾನ್ ಆರೋಗ್ಯ ಸಚಿವಾಲಯದ ಪ್ರತಿನಿಧಿಗಳು ಆರಂಭಿಕ ದಾಳಿಯಲ್ಲಿ ಅವರಿಗೆ ಉಂಟಾದ ಗಾಯಗಳು ಮೇಲ್ನೋಟಕ್ಕೆ ಕಂಡುಬರುವಷ್ಟು ಮಾತ್ರವಾಗಿದ್ದವು ಎಂದು ಹೇಳಿದ್ದರು.

ಇರಾನ್ ಹಿರಿಯ ಅಧಿಕಾರಿಗಳೂ ಅವರು ದೇಶದ ಕಾರ್ಯತಂತ್ರದ ನಿರ್ಧಾರಗಳು ಹಾಗೂ ಕಾರ್ಯಾಚರಣೆಯ ನಿರ್ದೇಶನಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ ಎಂದು ಪ್ರತಿಪಾದಿಸಿದ್ದರು.

ಇದೀಗ ಮೆಹರ್ ನ್ಯೂಸ್ ಬಿಡುಗಡೆ ಮಾಡಿರುವ ಹೊಸ ವಿಡಿಯೋ, ಖಮೇನಿ ಅವರ ಆರೋಗ್ಯದ ಕುರಿತು ಹರಡುತ್ತಿರುವ ಊಹಾಪೋಹಗಳಿಗೆ ಇರಾನ್ ನೀಡಿರುವ ಮಹತ್ವದ ಪ್ರತಿಕ್ರಿಯೆಯಾಗಿದೆ.

ಆದರೆ, ವಿಡಿಯೋ ಹಳೆಯದೋ ಅಥವಾ ಇತ್ತೀಚಿನದ್ದೋ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ. ಹೀಗಾಗಿ, ವಿಡಿಯೋದಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಅವರ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ.

ಮೊಜ್ತಬಾ ಖಮೇನಿ ಅವರ ಸಾರ್ವಜನಿಕ ಗೈರುಹಾಜರಿ ಮುಂದುವರಿದಿರುವುದು ಇರಾನ್‌ನ ನಾಯಕತ್ವದ ಸ್ಥಿರತೆ ಕುರಿತ ಪ್ರಶ್ನೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಅವರ ಆರೋಗ್ಯದ ಬಗ್ಗೆ ಇಸ್ರೇಲಿ, ಪಾಶ್ಚಾತ್ಯ ಹಾಗೂ ವಿರೋಧಪಕ್ಷಗಳಿಗೆ ಸಂಬಂಧಿಸಿದ ಮೂಲಗಳಿಂದ ವಿವಿಧ ರೀತಿಯ ಹೇಳಿಕೆಗಳು ಬರುತ್ತಿವೆ. ಮತ್ತೊಂದೆಡೆ, ಇರಾನ್ ಸರ್ಕಾರವು ಅವರು ನಾಯಕತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳುತ್ತಲೇ ಬಂದಿದೆ.

ಹೀಗಾಗಿ, ಹೊಸ ವಿಡಿಯೋ ಹೊರಬಿದ್ದಿದ್ದರೂ ಮೊಜ್ತಬಾ ಖಮೇನಿ ಅವರ ನಿಖರ ಆರೋಗ್ಯ ಸ್ಥಿತಿ, ಅವರು ಪ್ರಸ್ತುತ ಎಲ್ಲಿದ್ದಾರೆ ಮತ್ತು ಇರಾನ್‌ನ ಆಡಳಿತವನ್ನು ಅವರು ಯಾವ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂಬ ಪ್ರಶ್ನೆಗಳಿಗೆ ಇನ್ನೂ ಸಂಪೂರ್ಣ ಸ್ಪಷ್ಟತೆ ಸಿಕ್ಕಿಲ್ಲ.

ಮುಂದಿನ ದಿನಗಳಲ್ಲಿ ಅವರು ನೇರವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಲಿಖಿತ ಹೇಳಿಕೆಗಳ ಮೂಲಕವೇ ಮುಂದುವರಿಯುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಡೀ ದೇಹಕ್ಕೆ ಹರಡಿದ cancer, Joe Biden ಆರೋಗ್ಯ ಮತ್ತಷ್ಟು ಕ್ಷೀಣ; BBC ಸಂದರ್ಶನದಲ್ಲಿ ಪುತ್ರ ಹಂಟರ್ ಕಳವಳ

KBC ವೇದಿಕೆಯಲ್ಲಿ ಆಮಿರ್ ಖಾನ್‌; ‘4ನೇ ಮದುವೆ ಯಾವಾಗ?’; ಕಾಲೆಳೆದ ನೆಟ್ಟಿಗರು, Amitabh bachchan ಶೋ Promoಗೆ ಕಮೆಂಟ್‌ಗಳ ಮಹಾಪೂರ..!

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್, ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!

UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!